ಮೂಡಲಗಿ ಪುರಸಭೆಯಿಂದ ಸ್ವಚ್ಛತಾ ಅಭಿಯಾನ ಬಹುದೂರ: ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ

ಸುಧೀರ ನಾಯರ್ 

ಮೂಡಲಗಿ: ಗಟಾರಗಳೆಲ್ಲ ಕೊಳಚೆಯಿಂದ ತುಂಬಿ ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ಕಸದಿಂದ ಕಂಗೊಳಿಸುತ್ತಿರುವ ರಸ್ತೆಗಳು, ಅಲ್ಲಲ್ಲಿ ಕಸದ ರಾಶಿ ಒಟ್ಟಿನಲ್ಲಿ ಎಲ್ಲೆಡೆ ಅಸ್ವಚ್ಛತೆಯ ತಾಂಡವ, ಸೊಳ್ಳೆಗಳ ಸಾಮ್ರಾಜ್ಯ, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನತೆ ಇಂತಹ ಒಂದು ನೈಜ ಚಿತ್ರಣ ಕಾಣಬರುತ್ತಿರುವುದ ತಾಲೂಕಾ ಸ್ಥಳವಾದ ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ

ಹೌದು ಮೂಡಲಗಿ ನೂತನ ತಾಲೂಕಾಗಿ ರಚನೆಯಾಗಿದೆ. ಆದರೆ ಸ್ವಚ್ಛತೆಗೆ ಇಲ್ಲಿ ಮಹತ್ವವಿಲ್ಲ. ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿಗಳನ್ನು ಮತ್ತು ರಸ್ತೆಯ ಮೇಲಿರುವ ಕಸ ಕಡ್ಡಿಗಳನ್ನು ಗಮನಿಸಿದರೆ ಪ್ರಧಾನಿ  ನರೇಂದ್ರ ಮೋದಿ ಅವರ  ಸ್ವಚ್ಛ ಭಾರತ ಮಿಷನ್ ಯೋಜನೆಯಿಂದ ಮೂಡಲಗಿ ಪುರಸಭೆ ಹೊರತಾಗಿದೆ ಎಂದರೆ ತಪ್ಪಗಲಿಕ್ಕಿಲ್ಲ. 

ಪಟ್ಟಣದ ಎಲ್ಲಾ ಗಟ್ಟಾರಗಳು ಕೊಳಚೆ ನೀರಿನಿಂದ  ತುಂಬಿ ಗಬ್ಬೆದ್ದು ನಾರುತ್ತಿವೆ. ಚೆರಂಡಿಗಳು ಸೊಳ್ಳೆ ತಯಾರಾಗುವ ಕೇಂದ್ರವಾಗಿ ಮಾರ್ಪಟ್ಟಿವೆ. ಪಟ್ಟಣದ ಜನತೆಯು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಗಬ್ಬೆದ್ದು ನಾರುತ್ತಿರುವ ಗಟಾರಗಳಿಗೆ ಕೇವಲ  ರಾಷ್ಟ್ರೀಯ ಹಬ್ಬದ ಮತ್ತು ಇನ್ನೀತರ ಹಬ್ಬ ಹರಿದಿನಗಳಲ್ಲಿ ಮಾತ್ರ ಡಿಡಿಟಿ ಮತ್ತು ಟಿಸಿ ಪೌಡರ ಸಿಂಪಡಿಸಿ ಫಾಗಿಂಗ್ಗಳನ್ನು ಮಾಡಿ ಕಾಟಾಚಾರಕ್ಕೆ ಕೈತೊಳೆದು ಕೊಳ್ಳುವ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಜನತೆ. ಜನಪ್ರತಿನಿಧಿಗಳು ತಮಗೆ ಪುರಸಭೆಯಲ್ಲಿ ಇನ್ನೂ ಅಧಿಕಾರ ಸಿಗದ ಕಾರಣಕ್ಕೆ ನಮಗೆ ಸಂಬಂಧ ಇಲ್ಲಾ ಎನ್ನುವಂತೆ ಕಂಡು ಕಾಣದ ರೀತಿಯಲ್ಲಿ ಸುಮ್ಮನೆ ಕುಳಿತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಚರಂಡಿ ಸ್ವಚ್ಚ ಮಾಡಿದರು ಸಹ ಕಸವನ್ನು ತ್ಯಾಜ ವಸ್ತು ವಿಲೇವಾರಿ ಘಟಕಕ್ಕೆ ಸಾಗಿಸುವದರೊಳಗೆ ತೆಗೆದ ಕಸ, ಕೊಳೆಚೆ ಮತ್ತೆ ಚರಂಡಿ ಸೇರಿರುತ್ತದೆ. ಪಟ್ಟಣದ ಚಿಕ್ಕಲಗಾರ ಓಣಿಯ ಜನರು ಮುಸರಿಯನ್ನು ಪಕ್ಕದಲ್ಲಿರುವ ಖಾಲಿ ಜಾಗದಲ್ಲಿಯೇ ಸುರಿಯುತ್ತಿರುವುದು ಮತ್ತು ಇಲ್ಲಿಯೇ ಮಲ ವಿಸರ್ಜನೆ ಮಾಡುತ್ತಿರುವುದರಿಂದ ಪರಿಸರವೆಲ್ಲ ಗಬ್ಬೆದ್ದು ನಾರುತ್ತಿದೆ. ಈ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೇ ಯಾವೂದೇ ಪ್ರಯೋಜನವಾಗಿಲ್ಲ ಎಂಬುವುದು ಅಲ್ಲಿನ  ನಿವಾಸಿಗಳ ಆರೋಪವಾಗಿದೆ. ಈ ಸಮಸ್ಯೆ ಹೀಗೆ ಮುಂದುವರೆದರೆ ಇದರಿಂದ ಡೆಂಗ್ಯೂ, ಚಿಕ್ಕನ್ ಗೂನ್ಯಾ, ಮಲೇರಿಯಾ, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನರನ್ನು ಕಾಡುತ್ತಿದೆ.

ಯಾವುದೇ ಕೆಲಸ ಕಾರ್ಯಗಳು ಆಗಬೇಕಿದ್ದರೆ ಸಾರ್ವಜನಿಕರು ಮನವಿ ಸಲ್ಲಿಸಿ ಪ್ರತಿಭಟಿಸಿದಾಗ ಇಲ್ಲವೇ ಮಾಧ್ಯಮದಲ್ಲಿ ಸಮಸ್ಯೆ ಕುರಿತು ಸುದ್ದಿ ಪ್ರಕಟವಾದಾಗ ಮಾತ್ರ ಅಧಿಕಾರಿಗಳು ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಮತ್ತೇ  ಯಥಾಸ್ಥಿತಿಗೆ ಜಾರುವದು ಸಾಮಾನ್ಯ. ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ  ವಿಫಲರಾಗಿದ್ದಾರೆ. ಅಧಿಕಾರಿಗಳು ಸ್ವಪ್ರೇರಣೆಯಿಂದ ಸಾರ್ವಜನಿಕರ ಸೇವೆ ಯಾವಾಗ ಮಾಡುತ್ತಾರೆ ಎಂಬ ಯಕ್ಷ ಪ್ರಶ್ನೆ ಜನರನ್ನು ಕಾಡುತ್ತಿದೆ. "ಜನ ಸೇವೆಯೇ ಜನಾರ್ಧನ ಸೇವೆ" ಹಾಗೂ "ಸರಕಾರದ ಕೆಲಸ ದೇವರ ಕೆಲಸ" ಎಂಬ ವ್ಯಾಖ್ಯಾನಕ್ಕೆ ಇಲ್ಲಿ ಬೆಲೆ ಇಲ್ಲವೇ ಎಂದು ಸಾರ್ವಜನಿಕ ವಲಯದಲ್ಲಿ ಚಚರ್ೆಯ ವಿಷಯವಾಗಿದ್ದು. ಮೂಡಲಗಿ ಪುರಸಭೆಗೆ ಸ್ವಚ್ಚ ಭಾರತ ಮಿಷನ್ ಯೋಜನೆಯ ಸ್ವಚ್ಛ ಪುರಸಭೆ ಪ್ರಶಸ್ತಿಯೂ ಯಾವ ಆಧಾರದ ಮೇಲೆ ನೀಡಲಾಗಿದೆ ಎಂದು ಸಾರ್ವಜನಿಕರು ತಮ್ಮ ತಮ್ಮಲ್ಲೆ ಮಾತನಾಡುತ್ತಿದ್ದಾರೆ.

ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವರೇ ಎನ್ನುವದನ್ನು ಕಾದು ನೋಡಬೇಕಾಗಿದೆ.