ಇಸ್ಲಾಮಾಬಾದ್: ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಯತ್ನಿಸುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ಮನಸ್ಥಿತಿ ಬದಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಜನತೆ ಭಾರತದೊಂದಿಗೆ ಶಾಂತಿಯನ್ನು ಬಯಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆಗೆ ಸಿದ್ಧವಿದ್ದೇವೆ ಎಂದಿರುವ ಇಮ್ರಾನ್ ಖಾನ್, ಕಾಶ್ಮೀರದ ವಿವಾದ ಬಗ್ಗೆಯೂ ಮಾತನಾಡಿದ್ದು ಯಾವುದೂ ಅಸಾಧ್ಯವಲ್ಲ ಎಂದು ಹೇಳಿದ್ದಾರೆ.
ಮಾತುಕತೆ ನಡೆಸೋಣ, ಯಾವುದೇ ವಿಷಯವಾಗಿಯೂ ಮಾತುಕತೆಗೆ ನಾನು ಸಿದ್ಧನಿದ್ದೇನೆ, ಕಾಶ್ಮೀರ ವಿಷಯದಲ್ಲಿ ಸೇನಾ ಪರಿಹಾರ ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಇದೇ ವೇಳೆ ದೇಶದ ಹೊರಗೆ ಭಯೋತ್ಪಾದನೆಯನ್ನು ಹರಡಲು ಪಾಕಿಸ್ತಾನದ ನೆಲ ಬಳೆಕೆಯಾಗುತ್ತಿರುವ ಆರೋಪದ ಬಗ್ಗೆಯೂ ಮಾತನಾಡಿರುವ ಇಮ್ರಾನ್ ಖಾನ್, ಪಾಕಿಸ್ತಾನ ನೆಲವನ್ನು ಭಯೋತ್ಪಾದನೆಗಾಗಿ ಬಳಕೆ ಮಾಡಿಕೊಳ್ಳುವುದು ನೀಡುವುದು ನಮ್ಮ ಹಿತಾಸಕ್ತಿಯಲ್ಲ. ಪಾಕಿಸ್ತಾನದ ಮನಸ್ಥಿತಿ ಬದಲಾಗಿದೆ. ಪಾಕಿಸ್ತಾನದ ಜನತೆ ಭಾರತದೊಂದಿಗೆ ಶಾಂತಿ ಬಯಸುತ್ತಿದ್ದಾರೆ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ ಎಂದು ಇಮ್ರಾನ್ ಭಾರತೀಯ ಪತ್ರಕರ್ತರ ತಂಡದೊಂದಿಗಿನ ಸಂವಾದದಲ್ಲಿ ಹೇಳಿದ್ದಾರೆ.
ಇದೇ ವೇಳೆ 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ್ನು ಶಿಕ್ಷಿಸುವುದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಇಮ್ರಾನ್ ಖಾ, ಹಫೀಜ್ ಸಯೀದ್ ವಿರುದ್ಧ ಈಗಾಗಲೇ ವಿಶ್ವಸಂಸ್ಥೆ ನಿರ್ಬಂಧಗಳಿವೆ ಎಂದು ಹೇಳಿದ್ದಾರೆ.