ಎಸ್‌.ಎಸ್‌.ಎಲ್‌.ಸಿ. ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಜಿಪಂ ಸಿಎಒ

ಎಸ್‌.ಎಸ್‌.ಎಲ್‌.ಸಿ. ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಜಿಪಂ ಸಿಎಒ  Zilla Panchayat CEO provides guidance to SSLC students

ಲೋಕದರ್ಶನ ವರದಿ 

ಕಾರವಾರ  07:  ವಿದ್ಯಾರ್ಥಿಗಳು ಯಾವುದೊ ಒಂದು ಹಂತದಲ್ಲಿ ಸೋತೆವೆಂದ ಮಾತ್ರಕ್ಕೆ ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು, ಬದಲಿಗೆ ಸೋಲನ್ನು ಸವಾಲಾಗಿ ಸ್ವೀಕರಿಸಿ, ತಪ್ಪುಗಳನ್ನು ತಿದ್ದಿಕೊಂಡು ಹೆಚ್ಚಿನ ಪರಿಶ್ರಮದಿಂದ ಮರಳಿ ಪ್ರಯತ್ನಿಸಿದರೆ ಸೋಲೆ ಗೆಲುವಿನ ಮೆಟ್ಟಿಲಾಗಿ ಪರಿವರ್ತನೆಯಾಗುವುದು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಹೇಳಿದರು.   ಅವರು ಗುರುವಾರ ಮುಂಡಗೋಡ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.   

ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಮೂರು ಬಾರಿ ಅನುತ್ತೀರ್ಣರಾದರು ಪ್ರಯತ್ನ ನಿಲ್ಲಿಸಲಿಲ್ಲ. ಅಂದಿನ ನನ್ನ ಅಚಲ ನಿರ್ಧಾರದ ಕಾರಣದಿಂದ ಇಂದಿನವರೆಗೂ ನಾನು ಎದುರಿಸಿದ ಯಾವ ಪರೀಕ್ಷೆಯಲ್ಲೂ ಸೋಲು ಕಾಣಲಿಲ್ಲ. ನನ್ನಂತಹ ಸಾಮಾನ್ಯನಿಗೆ ಈ ಮಟ್ಟಿನ ಯಶಸ್ಸು ಸಾಧ್ಯವಾಗಬೇಕಾದರೆ ನಿಮ್ಮಿಂದ ಇನ್ನೂ ದೊಡ್ಡ ಮಟ್ಟಿನ ಯಶಸ್ಸು ಸಾಧ್ಯವಿದೆ. ಯಾರೊಬ್ಬರೂ ಧೃತಿಗೆಡದೆ ನಿಮ್ಮ ನ್ಯೂನತೆಗಳನ್ನು ಅರಿತು ಸಾಧನೆಯ ಹಾದಿಯತ್ತ ಗುರಿಯಿಡಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮನಮುಟ್ಟುವಂತೆ ಮಾರ್ಗದರ್ಶನ ಮಾಡಿದರು.   

ಇದಕ್ಕೂ ಪೂರ್ವದಲ್ಲಿ ನಗರದಲ್ಲಿನ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಜ್ಞಾನ ಪ್ರಜ್ಞಾ ಅಂಧ ಮಕ್ಕಳ ವಸತಿಯುತ ಶಾಲೆ ಹಾಗೂ ದೇಶಪಾಂಡೆ ನಗರದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಎಲ್ಲ ಕಡೆಯೂ ಮಕ್ಕಳೊಂದಿಗೆ ಬೆರೆತು ಸಂವಾದ ನಡೆಸಿದರು. ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳ ಪ್ರತಿಭೆ ನೋಡಿ ಮೆಚ್ಚುಗೆಯ ಮಾತನಾಡಿದರು. ಇದೇ ವೇಳೆ ಅಡುಗೆ ಕೋಣೆ, ದಾಸ್ತಾನು ಕೊಠಡಿ, ಶಾಲಾ ಕಟ್ಟಡ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಹಾಗೂ ಪ್ರಮುಖ ಕಡತಗಳನ್ನು ಪರೀಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.   

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಯೋಜನಾ ಅಧಿಕಾರಿ ಚೋಳಪ್ಪ ಬಣಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ, ಸಿಡಿಪಿಒ ಸಂಜೀವ್ ಕುಮಾರ್, ವಾರ್ಡನ್ ಕರಿಯಪ್ಪ ಸೇರಿದಂತೆ ಕಾಲೇಜು ಪ್ರಾಂಶುಪಾಲರು, ಶಿಕ್ಷಕರು, ವಸತಿ ಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.