ಬಾಲ್ಯವಿವಾಹ ಹಾಗೂ ಅಪ್ರಾಪ್ತರ ಗರ್ಭಧಾರಣೆ ತಡೆಗೆ ಕಠಿಣ ಕ್ರಮಕ್ಕೆ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ

ಬಾಲ್ಯವಿವಾಹ ಹಾಗೂ ಅಪ್ರಾಪ್ತರ ಗರ್ಭಧಾರಣೆ ತಡೆಗೆ ಕಠಿಣ ಕ್ರಮಕ್ಕೆ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ZP CEO Mohammed Haris Sumer instructs strict action to prevent child marriage and minor pregnancies

ಲೋಕದರ್ಶನ ವರದಿ  

       ಬಳ್ಳಾರಿ 25:   ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. 

ಸೋಮವಾರ, ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರೀಶೀಲನಾ ಸಮಿತಿ ಸಭೆ ಹಾಗೂ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಕುರಿತು ಪ್ರಗತಿ ಪರೀಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ಅಪ್ರಾಪ್ತರ ಗರ್ಭಧಾರಣೆಯನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ಬಳ್ಳಾರಿ ಜಿಲ್ಲೆಯ ಅತಿ ದೊಡ್ಡ ವೈಫಲ್ಯವಾಗಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಿದರೆ ಮಾತ್ರ ನಮ್ಮ ಶಿಕ್ಷಣ, ಪೌಷ್ಟಿಕಾಂಶ ಸೇರಿದಂತೆ ಎಲ್ಲಾ ಸಾಮಾಜಿಕ ನಿಯತಾಂಕಗಳು ಸುಧಾರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 

ಡಿಸೆಂಬರ್ 2025 ರಿಂದ ಮಾರ್ಚ್‌ 2026 ರವರೆಗೆ ಜಿಲ್ಲೆಯಲ್ಲಿ ಒಟ್ಟು 96 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 02 ನೇರ ಪೋಕ್ಸೋ ಪ್ರಕರಣಗಳು, 92 ಬಾಲ್ಯವಿವಾಹ ಮತ್ತು ಪೋಕ್ಸೋ ಸಂಯೋಜಿತ ಪ್ರಕರಣಗಳು ಮತ್ತು 02 ಪೋಕ್ಸೋ ಜೊತೆಗೆ ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಾದ ಪ್ರಕರಣಗಳಾಗಿವೆ. ಅದೇರೀತಿಯಾಗಿ 95 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದಿದ್ದು, ಈ ಪೈಕಿ 80 ಪ್ರಕರಣಗಳನ್ನು ಇತ್ಯರ್ಥಪಡಿಸಿ ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ 15 ಪ್ರಕರಣಗಳು ಬಾಕಿ ಇವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧೆ ನಂದಿನಿ ಅವರು ಸಭೆಗೆ ತಿಳಿಸಿದರು. 

ಏಪ್ರಿಲ್ 2025 ರಿಂದ ಅಕ್ಟೋಬರ್ 2025 ರವರೆಗಿನ ಅವಧಿಯಲ್ಲಿ ಒಟ್ಟು 148 ಅಪ್ರಾಪ್ತರ ಗರ್ಭಧಾರಣೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 88 ಪ್ರಕರಣಗಳಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಇನ್ನುಳಿದ ಪ್ರಕರಣಗಳಲ್ಲಿ 19 ಬಾಲಕಿಯರಿಗೆ 18 ವರ್ಷ ತುಂಬಿರುವುದರಿಂದ, ಬಾಕಿ ಉಳಿದ 41 ಪ್ರಕರಣಗಳಲ್ಲೂ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. 

ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಅಪ್ರಾಪ್ತರ ಗರ್ಭಧಾರಣೆಯ ಪ್ರತಿಯೊಂದು ಪ್ರಕರಣವೂ ಕಾನೂನಿನ ಪ್ರಕಾರ ಪೋಕ್ಸೋ ಕಾಯ್ದೆಯಡಿಯೇ ಬರುತ್ತದೆ. ಇದರಲ್ಲಿ ಪರಸ್ಪರ ಒಪ್ಪಿಗೆಯ ಪ್ರಶ್ನೆಯೇ ಬರುವುದಿಲ್ಲ. ಅಪ್ರಾಪ್ತ ಬಾಲಕಿಯರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದಿರುವುದು ಸಾಬೀತಾದರೆ ಅದು ಪೋಕ್ಸೋ ಪ್ರಕರಣವೇ ಆಗುತ್ತದೆ ಎಂದು ಸ್ಪಷ್ಟಪಡಿಸಿದರು. 

*ಶಿಡಿಗಿನಮೊಳ ಮತ್ತು ಸಂಡೂರು ಭಾಗಗಳತ್ತ ವಿಶೇಷ ಗಮನ ನೀಡಿ:* 

ಸಂಡೂರು ಮತ್ತು ಸಿಡಿಗಿನಮೊಳ ಭಾಗಗಳಲ್ಲಿ ಬಾಲ್ಯವಿವಾಹ ಮತ್ತು ಟೀನೇಜ್ ಪ್ರೆಗ್ನೆನ್ಸಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು. ಸಂಡೂರಿನಲ್ಲಿ ಕೇವಲ 32 ಕೆಜಿ ತೂಕವಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿ ಮೃತಪಟ್ಟಿರುವ ತಾಯಂದಿರ ಮರಣದ ಘಟನೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿ ವಿಷಾದ ವ್ಯಕ್ತಪಡಿಸಿದರು. 

ಸಂಡೂರು ತಾಲೂಕಿನ ಮೆಟ್ರಿಕಿ, ವಿಠಲಾಪುರ, ಗಂಗಲಾಪುರ ಸೇರಿದಂತೆ ಬಾಲ್ಯವಿವಾಹದ ಸಮಸ್ಯೆ ಹೆಚ್ಚಿರುವ ಸಮಸ್ಯಾತ್ಮಕ ಗ್ರಾಮ ಪಂಚಾಯತಿ ವ್ಯಾಪ್ತಿಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸಭೆ ನಡೆಸಬೇಕು. ಅಲ್ಲಿನ ಎಲ್ಲಾ ಧಾರ್ಮಿಕ ಮುಖಂಡರು ಹಾಗೂ ಮದುವೆ ಮಾಡಿಸುವವರನ್ನು ಕರೆದು ಸಭೆ ನಡೆಸಿ, ‘ನಾವು ಯಾವುದೇ ಕಾರಣಕ್ಕೂ ಬಾಲ್ಯವಿವಾಹ ಮಾಡಿಸುವುದಿಲ್ಲ’ ಎಂದು ಅವರಿಂದ ಕಡ್ಡಾಯವಾಗಿ ಬಾಂಡ್ ಪೇಪರ್ ಮೇಲೆ ಸಹಿ ಪಡೆದುಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಮುಂಬರುವ ಜೂನ್ ತಿಂಗಳಿನೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. 

ಸಂಡೂರು ತಾಲೂಕು ಆಸ್ಪತ್ರೆಯಿಂದ ಗಂಭೀರ ಸ್ಥಿತಿಯಲ್ಲಿರುವ ಗರ್ಭಿಣಿಯರನ್ನು ಬಳ್ಳಾರಿಯ ಬಿಎಂಸಿಆರ್‌ಸಿ ಆಸ್ಪತ್ರೆಗೆ ಕರೆದೊಯ್ಯಲು ಕನಿಷ್ಠ ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ. ಈ ವಿಳಂಬವನ್ನು ತಪ್ಪಿಸಲು ಮತ್ತು ತಾಯಿ-ಮಗುವಿನ ಪ್ರಾಣ ರಕ್ಷಿಸಲು, ತೀವ್ರ ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರನ್ನು ಹತ್ತಿರದ ಜಿಂದಾಲ್‌ನ ಜೆಎಸ್‌ಡಬ್ಲ್ಯೂ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. 

*ಜಾಗೃತಿ ಮತ್ತು ಜಂಟಿ ಕಾರ್ಯಾಚರಣೆ ನಡೆಸಿ:* 

ಬಾಲ್ಯವಿವಾಹ ತಡೆಗಟ್ಟಲು ಕೇವಲ ಕಾನೂನು ಕ್ರಮ ಮಾತ್ರವಲ್ಲದೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕಿದೆ. ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಕಾವಲು ಸಮಿತಿಗಳು ಜಂಟಿಯಾಗಿ ಕೆಲಸ ಮಾಡಬೇಕು. ಗ್ರಾಮೀಣ ಭಾಗಗಳಲ್ಲಿ ಸಾಕ್ಷ್ಯಚಿತ್ರಗಳ ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. 

ಬಾಲ್ಯವಿವಾಹ ಅಥವಾ ಪೋಕ್ಸೋ ಪ್ರಕರಣಗಳನ್ನು ದಾಖಲಿಸುವಾಗ ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗುವ ಅವಶ್ಯಕತೆಯಿಲ್ಲ. ಶಾಲಾ ದಾಖಲಾತಿಗಳನ್ನು ಪರೀಶೀಲಿಸಿ, ಬಾಲಕಿಯರ ವಯಸ್ಸನ್ನು ದೃಢೀಕರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಬಾಲ್ಯವಿವಾಹ ಕಾಯ್ದೆಯನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಎಫ್‌ಐಆರ್ ದಾಖಲಿಸಿ ಆರೋಪಿಗಳಿಗೆ ಕಾನೂನಿನ ಭಯ ಹುಟ್ಟಿಸಿದರೆ ಮಾತ್ರ ಈ ಸಾಮಾಜಿಕ ಪಿಡುಗನ್ನು ತಡೆಯಲು ಸಾಧ್ಯ ಎಂದರು. 

ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗುವ ಅಪ್ರಾಪ್ತರ ಗರ್ಭಧಾರಣೆಯ ದತ್ತಾಂಶಗಳನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಆರ್‌ಸಿಎಚ್ ಪೋರ್ಟಲ್‌ನಲ್ಲಿ ಈ ಮಾಹಿತಿ ನಿಖರವಾಗಿರಬೇಕು. ಪ್ರತಿ ತಿಂಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಅಪ್ರಾಪ್ತರ ಗರ್ಭಧಾರಣೆಯ ಮಾಹಿತಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಮುಂದಿನ ಸಭೆಯ ವೇಳೆಗೆ ಪೊಲೀಸ್ ಇಲಾಖೆಯು ಇಂತಹ ಎಷ್ಟು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಎಷ್ಟು ಪ್ರಕರಣಗಳು ಸತ್ಯಾಸತ್ಯತೆಯಿಂದ ಕೂಡಿವೆ ಎಂಬುದರ ಸಂಪೂರ್ಣ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು. 

ಹಾಸ್ಟೆಲ್‌ಗಳ (ವಿಶೇಷವಾಗಿ ಖಾಸಗಿ ಹಾಸ್ಟೆಲ್‌ಗಳು) ವಿದ್ಯಾರ್ಥಿಗಳ ಸುರಕ್ಷತೆ ಮತ್ತು ತುರ್ತು ಸೇವೆಗಳ ಲಭ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ತಮ್ಮ ದೂರು ನೀಡಲು ಸೂಕ್ತ ವ್ಯವಸ್ಥೆ ಇರಬೇಕು. ಕೆಲವು ಹಾಸ್ಟೆಲ್‌ಗಳಲ್ಲಿ (ಸರ್ಕಾರಿ ಮತ್ತು ಖಾಸಗಿ) ಮಕ್ಕಳಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತಿದ್ದು, ಅದರಲ್ಲಿ ಮೊದಲೇ ಸೇವ್ ಆಗಿರುವ ಕೇವಲ ಎರಡು ಸಂಖ್ಯೆಗಳಿಗೆ ಮಾತ್ರ ಕರೆ ಮಾಡಲು ಅವಕಾಶವಿರುತ್ತದೆ. ಈ ವ್ಯವಸ್ಥೆಯಲ್ಲಿ ಪ್ರಮುಖ ಸಹಾಯವಾಣಿ ಸಂಖ್ಯೆಯಾದ 1098 ಲಭ್ಯವಿರುವುದಿಲ್ಲ ಎಂಬ ಕೊರತೆ ಕೇಳಿಬಂದಿವೆ. ಈ ಸಮಸ್ಯೆಯನ್ನು ಕೇವಲ ಒಬ್ಬರೇ ಪರಿಹರಿಸಲು ಸಾಧ್ಯವಿಲ್ಲದ ಕಾರಣ, ವಿವಿಧ ಕಲ್ಯಾಣ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಸೂಚಿಸಿದರು. 

ಎಲ್ಲಾ ಖಾಸಗಿ ಹಾಸ್ಟೆಲ್‌ಗಳಲ್ಲಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ಗೋಡೆಯ ಮೇಲೆ ಪೇಂಟ್ ಮಾಡಿಸಬೇಕು ಅಥವಾ ಪ್ರದರ್ಶಿಸಬೇಕು. ಈ ನಿಯಮವನ್ನು ಪಾಲಿಸದ ಹಾಸ್ಟೆಲ್‌ಗಳ ನೋಂದಣಿಯನ್ನು ರದ್ದು ಮಾಡಬೇಕು ಎಂದು ಆದೇಶಿಸಿದರು. 

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್‌.ಹೊಸಮನೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಬಳ್ಳಾರಿ ನಗರ ಡಿವೈಎಸ್ಪಿ ಗೋವಿಂದರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಮೈದೂರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಡಿಪಿಒ ಅಧಿಕಾರಿಗಳು ಹಾಗೂ ವಿವಿಧ ಎನ್‌ಜಿಓ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.