ರಾಷ್ಟ್ರದ ಅಭಿವೃದ್ಧಿಗೆ ಯುವಕರೆ ಬುನಾದಿ: ಗಾಂವಕರ್

ರಾಷ್ಟ್ರದ ಅಭಿವೃದ್ಧಿಗೆ ಯುವಕರೆ ಬುನಾದಿ: ಗಾಂವಕರ್ Youth is the foundation for the development of the nation: Gaonkar

ಬಾಗಲಕೋಟೆ  04: ವಿಶೇಷ ಶಿಬಿರಗಳು ಸಾಮಾಜಿಕ ಸೇವೆಯಲ್ಲಿ ತೊಡಗುವಂತೆ ಮಾಡುವುದರ ಜೊತೆಗೆ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಹಾಯಕವಾಗುತ್ತವೆ ಎಂದು ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಪದನಿಮಿತ್ಯ ಕಾರ್ಯದರ್ಶಿಗಳಾದ ಡಾ.ಎಸ್‌.ಎಮ್ ಗಾಂವಕರ ಹೇಳಿದರು. 

ಬಸವೇಶ್ವರ ಕಲಾ ಮಹಾವಿದ್ಯಾಲಯದ   ಘಟಕದ ವತಿಯಿಂದ ಮುಚಖಂಡಿ ಗ್ರಾಮದಲ್ಲಿ ಹಮ್ಮಿಕೊಂಡ ಏಳು ದಿನದ ವಾರ್ಷಿಕ ವಿಶೇಷ ಶಿಬಿರವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯದ ಪ್ರಾರಂಭದಲ್ಲಿ ಬಡತನ, ಅನಕ್ಷರತೆಯ ಪರಿಸ್ಥಿತಿಯನ್ನು ಹೊಡೆದೊಡಿಸಲು ಮತ್ತು ಯುವಕರನ್ನು ಹಳ್ಳಿಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಗಾಂಧೀಜಿಯವರ ಕನಸನ್ನು ನನಸಾಗಿಸಲು ರಾಷ್ಟ್ರೀಯ ಸೇವಾ ಯೋಜನೆ ಹುಟ್ಟಿಕೊಂಡಿದೆ. ಶಿಬಿರದಿಂದ ನಾಯಕತ್ವಗುಣ ಬೆಳೆಯಲು ಸಹಾಯವಾಗುತ್ತದೆ. ನನ್ನ ಭಾರತಕ್ಕಾಗಿ ಒಗ್ಗಟ್ಟು ಎಂಬ ಘೋಷವಾಕ್ಯದೊಂದಿಗೆ ಈ ಶಿಬಿರ ಹಮ್ಮಿಕೊಂಡಿದ್ದು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಲು ಇದೊಂದು ನಿಮಗೆ ಸುವರ್ಣವಕಾಶ ಇದನ್ನು ಸಮರ​‍್ಕವಾಗಿ ಬಳಸಿಕೊಳ್ಳಿ ಎಂದರು. 

ಅತಿಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದಾಗಿದ್ದು, ಎಲ್ಲರ ಶಕ್ತಿಯನ್ನು ಒಗ್ಗೂಡಿಸಿ ಹಳ್ಳಿಗಳನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ದೇಶಿಯ ಉತ್ಪನ್ನಗಳನ್ನು ಬಳಕೆಗೆ ಕರೆ ನೀಡಬೇಕು. ದೇಶಕ್ಕಾಗಿ ನಾನು ಏನನ್ನಾದರೂ ಸಾಧನೆ ಮಾಡಬೇಕೆಂದು ಶಿಬಿರಾರ್ಥಿಗಳು ಪ್ರತಿಜ್ಞೆಯ ಪಣ ತೊಡಬೇಕು ಎಂದರು. 

ಪ್ರಾಚಾರ್ಯರಾದ ಬಿ.ಆರ್ ಪಾಟೀಲ ಅವರು ಮಾತನಾಡಿ ವ್ಯಕ್ತಿತ್ವ ವಿಕಸನಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಘಟಕಗಳಿದ್ದು,  ಶಿಬಿರ ವಿಶೇಷ ವೇದಿಕೆಯಾಗಿದೆ. ಪಠ್ಯಕ್ರಮದಲ್ಲಿ ದೇಶದ ಜನಸಂಖ್ಯೆ ಅಭಿವೃದ್ಧಿಗೆ ಒಂದು ಶಾಪ ಎಂದು ಬೋಧನೆ ಮಾಡಲಾಗುತ್ತಿದೆ.  ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬೆಳೆಸಿಕೊಂಡರೆ ಅದು ಹೊರೆಯಾಗದೆ ವರವಾಗುತ್ತದೆ. ಶಿಬಿರಗಳು ಸಮುದಾಯದೊಂದಿಗೆ ಯುವಕರನ್ನು ಬೆಸೆಯುವ ಕೆಲಸ ಮಾಡುತ್ತವೆ. ಪ್ರಸ್ತುತ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದ್ದು, ಹಳ್ಳಿಯನ್ನು ಅರ್ಥೈಸಿಕೊಳ್ಳುವ ಕೆಲಸವನ್ನು ಮಾಡಬೇಕು. ತಂತ್ರಜ್ಞಾನದಿಂದ ಆಹಾರ ಬೆಳೆಯಲು ಸಾಧ್ಯವಿಲ್ಲ ಅದನ್ನು ಮಾನವರೇ ಮಾಡಬೇಕು. ಎಐ ಆಗಮನದಿಂದ ನಿರುದ್ಯೋಗ ಹೆಚ್ಚುತ್ತದೆ ಎಂಬ ಭಯ ಹುಟ್ಟಿಸಲಾಗುತ್ತಿದೆ.  ಅದು ಶುದ್ದಸುಳ್ಳಾಗಿದ್ದು,  ಸೂಕ್ಷ್ಮ ಕೌಶಲ್ಯ ಬೆಳಸಿಕೊಂಡವರಿಗೆ ಹೊಸದೊಂದು ವೇದಿಕೆ ಸಿಗಲಿದೆ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು. 

ಪ್ರಾಚಾರ್ಯರಾದ ಎಸ್‌.ಆರ್ ಮೂಗನೂರಮಠ ಅವರು ಮಾತನಾಡಿ ಸಾಮಾಜಿಕ ಕೌಶಲ್ಯಗಳು ಹೆಚ್ಚು ಪ್ರಾಧ್ಯಾನ್ಯತೆ ಪಡೆಯುತ್ತಿದ್ದು,  ಅವುಗಳನ್ನು ಬೆಳಸಿಕೊಳ್ಳುವುದು ಅವಶ್ಯಕವಾಗಿದೆ. ದುಡಿಯುವ ಕೈಗಳಿಗೆ ಮಾತ್ರ ಊಟ ಮಾಡುವ ಹಕ್ಕಿದೆ, ಹಳ್ಳಿಗಳಲ್ಲೂ ತಂತ್ರಜ್ಞಾನ ಆಧಾರಿತ ಕೃಷಿಕಾರ್ಯಗಳು ಜಾರಿಯಲ್ಲಿದ್ದು ಜನಜೀವನವನ್ನು ಅರಿಯಲು ಶಿಬಿರಗಳು ಸಹಾಯ ಮಾಡುತ್ತವೆ ಎಂದರು. 

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕಾಧಿಕಾರಿಗಳಾದ ಡಾ.ಎಂ.ಎಚ್ ವಡ್ಡರ, ಡಾ. ವಿರುಪಾಕ್ಷಿ ಎನ್‌.ಬಿ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ ಸೇರಿದಂತೆ ಉಪನ್ಯಾಸಕರುಗಳು ಮತ್ತು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.