ಯುವ ಕಲಾವಿದ ಡಾ. ಮುರಗಿಗೆ ಒಲಿದ ರಾಷ್ಟ್ರೀಯ ಯುವ ಪ್ರಶಸ್ತಿ
Young artist Dr. Muragi wins National Youth Award
ಲೋಕದರ್ಶನ ವರದಿ
ಧಾರವಾಡ 30: ದಿವ್ಯಾಂಗರ ಏಳ್ಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪರಮಪೂಜ್ಯ ಪಂಡಿತ ಶ್ರೀ ಪುಟ್ಟರಾಜ ಕವಿ ಗವಾಯಿಗಳ ಸಾಧನಾ ಕ್ಷೇತ್ರವಾದ ಸಂಗೀತ ಕಾಶಿ ಗದುಗಿನ ಬಸವೇಶ್ವರ ನಗರದ ಸಂಸ್ಕೃತಿ ಚಿಂತಕ ದಂಪತಿಗಳಾದ ಶ್ರೀಮತಿ ರತ್ನಮ್ಮ, ದಿ. ತಿಪ್ಪಣ್ಣ ಮುರಗಿ ದಂಪತಿಗಳ 5ನೇ ಸುಪುತ್ರರಾಗಿ 1984 ಜನೇವರಿ 25 ರಂದು ಜನಿಸಿದ ಡಾ. ನಾಗಲಿಂಗ ಮುರಗಿಯವರು ಸಂಗೀತ ಶಾರದೆಯ ವರ್ರಸಾದವೇ ಆಗಿದ್ದಾರೆ,
ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಡಾ. ನಾಗಲಿಂಗ ಮುರಗಿ ಅವರು, ಶಾಲಾ ಶಿಕ್ಷಣದ ಜೊತೆ ಜೊತೆಗೆ 12ನೇ ವಯಸ್ಸಿನಲ್ಲಿ ಗದಗಿನ ವಿಜಯ ಕಲಾಮಂದಿರದಲ್ಲಿ ಪಂಡಿತ ಗುರುನಾಥ ಸುತಾರ ಅವರ ಬಳಿಯಲ್ಲಿ ತಬಲಾ ಅಭ್ಯಾಸ ಪ್ರಾರಂಭಿಸಿ, ಪಂಡಿತ ದೊಡ್ಡಬಸಪ್ಪ ಹೂಗಾರ, ವಿರೇಶ್ವರ ಪುಣ್ಯಾಶ್ರಮದ ಶರಣಪ್ಪ ದುತ್ತರಗಿ, ಶರಣಪ್ಪ ಇಳಕಲ್, ಡಾ. ಹನುಮಂತ ಹೂಗಾರ, ಧಾರವಾಡದ ಡಾ. ರವಿಕಿರಣ ನಾಕೋಡ ಅವರ ಬಳಿಯಲ್ಲಿ ಹೆಚ್ಚಿನ ತಬಲಾ ಅಭ್ಯಾಸವನ್ನು ಮಾಡಿದ್ದಾರೆ. ಪ್ರಸ್ತುತ ನಾಡಿನ ಖ್ಯಾತ ತಬಲಾ ವಾದಕರಾದ ಪಂಡಿತ ರಘುನಾಥ ನಾಕೋಡ ಅವರ ಬಳಿ ಹೆಚ್ಚಿನ ತಬಲಾ ಅಭ್ಯಾಸ ಮುಂದುವರೆಸಿದ್ದಾರೆ. ಬಿ. ಮ್ಯೂಸಿಕ್. ಎಂ. ಮ್ಯೂಸಿಕ್ ಪದವಿ ಪಡೆದ ಇವರು "ತಬಲಾ ವಾದನ ಕಲೆಗೆ ಧಾರವಾಡ ಜಿಲ್ಲೆಯ ಕೊಡುಗೆ" ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ 2023ರಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಧಾರವಾಡ ಆಕಾಶವಾಣಿ ಕೇಂದ್ರದ "ಬಿ" ಶ್ರೇಣಿ ತಬಲಾ ಕಲಾವಿದರಾಗಿದ್ದಾರೆ.
ಡಾ. ನಾಗಲಿಂಗ ಮುರಗಿ ಅವರು 2013 ರಲ್ಲಿ ವಿವೇಕ ಸೌಂಡ್ ಸಿಸ್ಟಮ್ ಧ್ವನಿವರ್ಧಕ ಕಂಪೆನಿ ಸ್ಥಾಪಿಸಿ ಇದರ ಮೂಲಕ ಹತ್ತಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ್ದಾರೆ. ಅಷ್ಟೇ ಅಲ್ಲದೇ ಅನೇಕ ಸಂಗೀತ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಧ್ವನಿವರ್ಧಕ ಸೇವೆಯನ್ನು ನೀಡುತ್ತಿದ್ದಾರೆ. ಡಾ. ನಾಗಲಿಂಗ ಮುರಗಿ ಅವರು ಹುಬ್ಬಳ್ಳಿ ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮಗಳ ಸಂಗೀತ ಕಾರ್ಯಕ್ರಮದ ಆಯೋಜನೆಯಲ್ಲಿ ಇವರ ಪಾತ್ರ ಪ್ರಮುಖವಾದದ್ದು.
ದಿವ್ಯಾಂಗರ ಸೇವೆಗೆ ಇರುವ ಏಕೈಕ ರಾಷ್ಟ್ರೀಯ ಸಂಸ್ಥೆ ಸಕ್ಷಮ ದ ಉತ್ತರ ಕರ್ನಾಟಕ ಪ್ರಾಂತದ ಸಹಕಾರ್ಯದರ್ಶಿಯಾಗಿ, 2014 ರಿಂದ ಗಾನಸುಧಾ ಸಂಗೀತ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, 2001 ರಿಂದ ಸಿದ್ದಾರ್ಥ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ದೈಹಿಕ ದೌರ್ಬಲ್ಯವನ್ನು ಹೊಂದಿದ್ದರೂ ಅದಕ್ಕೆ ಅಂಜದೇ ಅಳುಕದೇ ಶ್ರಮ ಹಾಕಿ, ಸಾಧನೆ ಮಾಡುತ್ತಿರುವ ಹಾಗೂ ಬದುಕಿನ ಬಗ್ಗೆ ಛಲ ಮೂಡಲು ಸ್ಪೂರ್ತಿಯಾಗುವಂತಹ ಡಾ. ನಾಗಲಿಂಗ ಮುರಗಿ ಇಂದಿನ ಯುವ ಸಮೂಹಕ್ಕೆ ಮಾದರಿ ಯುವಕರಾಗಿದ್ದಾರೆ.
ಡಾ. ನಾಗಲಿಂಗ ಮುರಗಿ, ಹುಬ್ಬಳ್ಳಿಯ ಭವಾನಿ ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ 240ಕ್ಕೂ ಹೆಚ್ಚು ದಾಸವಾಣಿ ಕಾರ್ಯಕ್ರಮಗಳನ್ನು ಆಯೋಜಿಸಿ ತಬಲಾ ಸಾಥ್ ನೀಡಿದ್ದಾರೆ. ಕಳೆದ 18 ವರ್ಷಗಳಿಂದ ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮ ಆಯೋಜಿಸುವ ನವರಾತ್ರಿ ಉತ್ಸವ, ಹಂಪಿ ಉತ್ಸವ, ಮೈಸೂರಿನ ಬಹುರೂಪಿ ನಾಟಕೋತ್ಸವ, ಹುನಗುಂದದ ಚಾಲುಕ್ಯ ಉತ್ಸವ, ಖಾನಾಪುರದ ಕನ್ನಡ ಸಾಹಿತ್ಯ ಸಮ್ಮೇಳನ, ಧಾರವಾಡ ಉತ್ಸವ ಸೇರಿದಂತೆ ಕರ್ನಾಟಕದ ಎಲ್ಲ ರಾಮಕೃಷ್ಣ ವಿವೇಕಾನಂದ ಆಶ್ರಮದ ಕಾರ್ಯಕ್ರಮಗಳಲ್ಲಿ ತಬಲಾ ಸಾಥ್ ನೀಡಿ ಪೂಜ್ಯರ ಕೃಪೆಗೆ ಪಾತ್ರರಾಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇವರ ಸಂಗೀತ ಕಲಾ ಸೇವೆಯನ್ನು ಗುರುತಿಸಿ ಅನೇಕ ರಾಮಕೃಷ್ಣ ವಿವೇಕಾನಂದ ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು, ಸಂಘ-ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2002 ಮತ್ತು 2005ರಲ್ಲಿ ಯುವ ಚೇತನ ಪ್ರಶಸ್ತಿ ನೀಡಿ ಗೌರವಿಸಿದೆ. ಮಹಾಶಿವರಾತ್ರಿ ಸಂಗೀತೋತ್ಸವ ಸಮಿತಿ, ಮುದಿ ಮಾರುತಿ ದೇವಸ್ಥಾನ ಧಾರವಾಡ, ಸಾಕಾರ ಸಂಸ್ಥೆ, ಧಾರವಾಡ, ಮಯೂರ ನೃತ್ಯ ಅಕಾಡೆಮಿ, ಹುಬ್ಬಳ್ಳಿ, ರೋಟರಿ ಕ್ಲಬ್, ಹುಬ್ಬಳ್ಳಿ ವತಿಯಿಂದ ತಬಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ವಿವಿಧ ಪ್ರಶಸ್ತಿ ನೀಡಿ ಗೌರವಿಸಿವೆ.
ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ 2025ರ ರಾಷ್ಟ್ರೀಯ ಯುವ ಪ್ರಶಸ್ತಿಗೆ ಗದಗನ ಬಸವೇಶ್ವರ ನಗರದ ತಬಲಾ ವಾದಕರಾದ ಡಾ. ನಾಗಲಿಂಗ ಮುರಗಿ ಅವರನ್ನು ಆಯ್ಕೆ ಮಾಡಿ 31ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ಸಾಂಸ್ಕೃತಿಕ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ತಬಲಾ ವಾದಕರಾದ ಡಾ. ನಾಗಲಿಂಗ ಮುರಗಿ ಅವರಿಗೆ "ರಾಷ್ಟ್ರೀಯ ಯುವ ಪ್ರಶಸ್ತಿ" ಪ್ರದಾನ ಮಾಡಲಾಗುವುದು ನಂತರ ತಬಲಾ ಸೋಲೋ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಅಥಣಿಯ ಇಂಗಳಗಾಂವನ ಮುರುಘೇಂದ್ರ ಶಿವಯೋಗಿ ಮಠದ ಮ.ನಿ.ಪ್ರ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮಾಜಿ ಶಾಸಕರು, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ನೀಲಾ ಕೊಡ್ಲಿ, ಟ್ರಸ್ಟ್ ಅಧ್ಯಕ್ಷ ಪದ್ಮಶ್ರೀ ಎಂ. ವೆಂಕಟೇಶಕುಮಾರ, ಜಿಲ್ಲಾಧಿಕಾರಿ ದಿವ್ಯ ಆರ್ ಪ್ರಭು, ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಭಾಗವಹಿಸಲಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 