ಫೋಟೋಗಾಗಿ ಯೊಸೆಮೈಟ್ ನ್ಯಾಷನಲ್ ಪಾರ್ಕ್ ತುತ್ತತುದಿ ಏರಿದ್ದ ಭಾರತೀಯ ದಂಪತಿ ಪ್ರಪಾತಕ್ಕೆ ಬಿದ್ದು ಸಾವು

ಕ್ಯಾಲಿಫೋರ್ನಿಯಾ 30: ಕ್ಯಾಲಿಫೋರ್ನಿಯಾ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದ್ದ ಭಾರತದ ದಂಪತಿಗಳು 800 ಅಡಿ ಪ್ರಪಾತಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕ್ಯಾಲಿಫೋರ್ನಿಯಾದ ಖ್ಯಾತ ರಾಷ್ಟ್ರೀಯ ಉದ್ಯಾನದಲ್ಲಿ ದಂಪತಿಗಳಾದ ವಿಷ್ಣು ವಿಶ್ವನಾಥ್ (29 ವರ್ಷ) ಮತ್ತು ಮೀನಾಕ್ಷಿ ಮೂರ್ತಿ (30 ವರ್ಷ)  ಎಂಬುವವರು ಫೋಟೋಗಾಗಿ ಪಾರ್ಕ್ ನ ತುತ್ತತುದಿ ಏರಿದ್ದಾರೆ. ಅಲ್ಲಿಂದ ಸುಮಾರು 800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. ಈ ಜೋಡಿ ಇಲ್ಲಿನ ಯೊಸೆಮೈಟ್ ನ್ಯಾಷನಲ್ ಪಾರ್ಕ್ ನ ಬೆಟ್ಟದ ತುತ್ತತುದಿಯಿಂದ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದಿರುವುದಾಗಿ  ಅಧಿಕಾರಿಗಳು ತಿಳಿಸಿದ್ದಾರೆ. 

ಯೊಸೆಮೈಟ್ ನ್ಯಾಷನಲ್ ಪಾರ್ಕ್ ಯೊಸೆಮೈಟ್ ವ್ಯಾಲಿ, ಯೊಸೆಮೈಟ್ ಫಾಲ್ಸ್ ಮತ್ತು ಎಲ್ ಕ್ಯಾಪಿಟನ್ ವೀಕ್ಷಣೆಗೆ ಈ ಜೋಡಿ ತೆರಳಿದ್ದು ಈ ವೇಳೆ ಪಾರ್ಕ್ ನ ತುತ್ತತುದಿಯಲ್ಲಿ ನಿಂತು ಪೋಟೋ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ.

ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಕ್ಟೋಬರ್ 25ರಂದೇ ನ್ಯಾಷನಲ್ ಪಾರ್ಕ್ ಅಧಿಕೃತ ಹೇಳಿಕೆ ನೀಡಿತ್ತು. ಆದರೆ ಸೋಮವಾರ ಈ ಮೃತ ದಂಪತಿ ಭಾರತದ ಮೂಲದವರು ಎಂದು ತಿಳಿದು ಬಂದಿದೆ. 

ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದು, ಹಲವು ವರ್ಷಗಳಿಂದ ಈ ಜೋಡಿ ಅಮೆರಿಕದಲ್ಲಿ ನೆಲೆಸಿತ್ತು. ಅಮೆರಿಕದ ಸಿಸ್ಕೊ ಸಂಸ್ಥೆಯಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಸಿಕ್ಕಮೇಲೆ ಈ ದಂಪತಿ ನ್ಯೂಯಾರ್ಕ್ನಿಂದ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ದಂಪತಿಗೆ ವಿಶ್ವ ಸುತ್ತುವ ಕನಸಿತ್ತು ಎಂಬುದನ್ನು ಅವರೇ ತಮ್ಮ 'Holidays and HappilyEverAfters' ಎಂಬ ಬ್ಲಾಗ್ನಲ್ಲಿ ಬರೆದಿಕೊಂಡಿದ್ದಾರೆ. ಅಲ್ಲದೆ ತಮ್ಮ ಪ್ರವಾಸದ ಫೋಟೋಗಳನ್ನು ಮತ್ತು ಅನುಭವವನ್ನು ನಿಯಮಿತವಾಗಿ ಬ್ಲಾಗ್ ನಲ್ಲಿ ಬರೆಯುತ್ತಿದ್ದರು ಎನ್ನಲಾಗಿದೆ.