ಸಡಗರ ಸಂಭ್ರಮದಲ್ಲಿ ಯೋಗಿ ನಾರಾಯಣ ಯತೀಂದ್ರರ ಗಂಗಾಸ್ಥಳ ಮೆರವಣಿಗೆ

ಸಡಗರ ಸಂಭ್ರಮದಲ್ಲಿ ಯೋಗಿ ನಾರಾಯಣ ಯತೀಂದ್ರರ ಗಂಗಾಸ್ಥಳ ಮೆರವಣಿಗೆ  Yogi Narayana Yathindra’s Gangasthala procession held amidst great festivity and celebration

ಲೋಕದರ್ಶನ ವರದಿ 

ಕಂಪ್ಲಿ, ಆ. 22: ಪಟ್ಟಣದ ಮಾರುತಿನಗರ (ಶಿಬಿರದಿನ್ನಿ)ದಲ್ಲಿ ಕಂಪ್ಲಿ ಬಲಿಜ ಸಂಘದ ನೇತೃತ್ವದಲ್ಲಿ ಬಲಿಜ ಭವನದ 9ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಯೋಗಿ ನಾರಾಯಣ ಯತೀಂದ್ರರ ಗಂಗಾಸ್ಥಳ ಮೆರವಣಿಗೆ ಶನಿವಾರ ಸಡಗರ ಸಂಭ್ರಮದಿಂದ ನಡೆಯಿತು.  

ಕಂಪ್ಲಿ-ಕೋಟೆ ತುಂಗಭದ್ರಾ ನದಿಯಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ಶ್ರೀ ಯೋಗಿ ನಾರಾಯಣ ಯತೀಂದ್ರರ ಭಾವಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಮಸೀದಿ, ಅಂಬೇಡ್ಕರ್ ವೃತ್ತ, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿದ ಮೆರವಣಿಗೆ ಶಿಬಿರದಿನ್ನಿಯ ಬಲಿಜ ಭವನದಲ್ಲಿ ಸಂಪನ್ನಗೊಂಡಿತು.  ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭ, ಕಳಸ, ಭಜನೆ ಹಾಗೂ ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರುಗು ನೀಡಿದವು.  

ಬಲಿಜ ಸಂಘದ ಅಧ್ಯಕ್ಷ ಡಿ. ಶ್ರೀನಿವಾಸ ಮಾತನಾಡಿ, ಯೋಗಿ ನಾರಾಯಣರ ತತ್ವಾದರ್ಶಗಳು ನಮ್ಮ ನಿತ್ಯ ಜೀವನಕ್ಕೆ ಮಾರ್ಗದರ್ಶಕವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ. ಮಲ್ಲಿಕಾರ್ಜುನ, ಬಳೆಗಾರ ವೆಂಕಟೇಶ, ಕಾರ್ಯದರ್ಶಿ ತಿರುಮಲ ದೇವರು, ಖಜಾಂಚಿ ಕವಿತಾ, ಶಿವಕುಮಾರ ಸೇರಿದಂತೆ ಮುಖಂಡರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.