ರಕ್ಷಾ ಬಂಧನದಂದು ಮಹಿಳೆಯರ ಗೌರವ, ರಕ್ಷಣೆಗೆ ಪ್ರತಿಜ್ಞೆ ಕೈಗೊಳ್ಳುವಂತೆ ಯೋಗಿ ಆದಿತ್ಯನಾಥ್ ಕರೆ
Yogi Adityanath urges people to pledge respect, protection of women on Raksha Bandhan
ಲಖನೌ, ಆ. 24 : ರಕ್ಷಾ ಬಂಧನದ ಅಂಗವಾಗಿ ಪ್ರತಿಯೊಬ್ಬ ಸಹೋದರಿ ಮತ್ತು ಮಗಳನ್ನು ಗೌರವಿಸಿ, ರಕ್ಷಿಸುವ ಸಂಕಲ್ಪವನ್ನು ಕೈಗೊಂಡು, ‘ರಕ್ಷಾ ಸೂತ್ರ’ದ ಆಶಯವನ್ನು ತಮ್ಮ ನಡವಳಿಕೆಯ ಭಾಗವಾಗಿಸಿಕೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಜನತೆಗೆ ಬರೆದ ತಮ್ಮ ವಾರದ ಪತ್ರದಲ್ಲಿ ಮುಖ್ಯಮಂತ್ರಿ, ರಕ್ಷಾ ಬಂಧನವು ಕೇವಲ ಸಹೋದರನ ಕೈಗೆ ಪವಿತ್ರ ದಾರವನ್ನು ಕಟ್ಟುವ ಹಬ್ಬವಲ್ಲ. ಇದು ಪ್ರೀತಿ, ವಿಶ್ವಾಸ ಮತ್ತು ಸಂಕಲ್ಪದ ಪವಿತ್ರ ಹಬ್ಬವಾಗಿದ್ದು, ಕುಟುಂಬಗಳನ್ನು ಬೆಸೆಯುವುದರ ಜೊತೆಗೆ ಸಮಾಜದಲ್ಲಿ ಆತ್ಮೀಯತೆಯನ್ನು ಹೆಚ್ಚಿಸುತ್ತದೆ ಮತ್ತು ಸಹೋದರಿಯರು ಹಾಗೂ ಪುತ್ರಿಯರನ್ನು ಗೌರವಿಸಿ, ರಕ್ಷಿಸುವ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದು ಹೇಳಿದರು.
ಈ ವರ್ಷ ಶ್ರಾವಣ ಪೂರ್ಣಿಮೆಯಂದು ಆಗಸ್ಟ್ 28ರಂದು ರಕ್ಷಾ ಬಂಧನ ಆಚರಿಸಲಾಗುತ್ತಿದ್ದು, ಈ ಹಬ್ಬವು ಭಾರತದ ಶಾಶ್ವತ ಮೌಲ್ಯಗಳಾದ ಪ್ರೀತಿ, ರಕ್ಷಣೆ ಮತ್ತು ಜವಾಬ್ದಾರಿಯ ಸಂಕೇತವಾಗಿದೆ ಎಂದು ಅವರು ಹೇಳಿದರು.
ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಗಳನ್ನು ಉಲ್ಲೇಖಿಸಿದ ಯೋಗಿ, ಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಬರುತ್ತಿದ್ದಾಗ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಗಾಯಕ್ಕೆ ಕಟ್ಟಿದಳು. ಬಳಿಕ ಸಂಕಷ್ಟದ ಸಂದರ್ಭದಲ್ಲಿ ಶ್ರೀಕೃಷ್ಣ ದ್ರೌಪದಿಯನ್ನು ರಕ್ಷಿಸುವ ಮೂಲಕ ಆ ಪ್ರೀತಿಗೆ ಪ್ರತಿಯಾಗಿ ಸ್ಪಂದಿಸಿದನು ಎಂದು ಹೇಳಿದರು. ಇದೇ ರೀತಿ, ರಾಜ ಬಲಿಗೆ ರಕ್ಷಣಾ ಸೂತ್ರವನ್ನು ಕಟ್ಟಿ ಲಕ್ಷ್ಮೀದೇವಿ ಅವರನ್ನು ಸಹೋದರನನ್ನಾಗಿ ಮಾಡಿಕೊಂಡು ಶ್ರೀವಿಷ್ಣುವನ್ನು ತನ್ನೊಂದಿಗೆ ಕರೆದುಕೊಂಡು ಹೋದ ಕಥೆಯನ್ನೂ ಅವರು ಪ್ರಸ್ತಾಪಿಸಿದರು.
“ಈ ಘಟನೆಗಳು ಪ್ರೀತಿ ಕೇವಲ ಸಂಬಂಧಗಳನ್ನು ಸೃಷ್ಟಿಸುವುದಲ್ಲ, ಅದು ಜವಾಬ್ದಾರಿ ಮತ್ತು ರಕ್ಷಣೆಯ ಭಾವನೆಯನ್ನೂ ಬೆಳೆಸುತ್ತದೆ ಎಂಬುದನ್ನು ತೋರಿಸುತ್ತವೆ,” ಎಂದು ಮುಖ್ಯಮಂತ್ರಿ ಹೇಳಿದರು.
ತಾಂತ್ರಿಕ ಪ್ರಗತಿಯೊಂದಿಗೆ ಹೊಸ ಪೀಳಿಗೆ ವೇಗವಾಗಿ ಮುನ್ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ, ಇಂತಹ ಮೌಲ್ಯಗಳನ್ನು ಅವರ ನಡವಳಿಕೆಯ ಭಾಗವಾಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಯೋಗಿ ಹೇಳಿದರು. ನ್ಯಾಯ, ವಿವೇಕ, ಸೌಹಾರ್ದತೆ ಮತ್ತು ಸಾಮಾಜಿಕ ಏಕತೆಯ ಸಂಸ್ಕೃತಿಯನ್ನು ಬೆಳೆಸಬೇಕಿದ್ದು, ಇವು ಕುಟುಂಬಗಳನ್ನು ಬಲಪಡಿಸುವುದರ ಜೊತೆಗೆ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದರು.
ಮಹಿಳೆಯರ ಸುರಕ್ಷತೆ, ಗೌರವ ಮತ್ತು ಸ್ವಾವಲಂಬನೆಗೆ ತಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದ ಅವರು, ‘ಮಿಷನ್ ಶಕ್ತಿ’ ಮತ್ತು ‘ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆ’ ಮೂಲಕ ಹೆಣ್ಣುಮಕ್ಕಳ ಸುರಕ್ಷತೆ, ಶಿಕ್ಷಣ ಮತ್ತು ಪ್ರಗತಿಗೆ ವೇಗ ನೀಡಲಾಗಿದೆ ಎಂದರು.
‘ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ’, ‘ನಿರ್ಗತಿಕ ಮಹಿಳಾ ಪಿಂಚಣಿ ಯೋಜನೆ’ ಹಾಗೂ ‘ಮಹಿಳಾ ಉದ್ಯಮಿ ಕ್ರೆಡಿಟ್ ಕಾರ್ಡ್’ ಮೂಲಕ ಸಾಮಾಜಿಕ ಭದ್ರತೆ ಮತ್ತು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲಾಗಿದೆ ಎಂದು ಅವರು ಹೇಳಿದರು.
2017ರಲ್ಲಿ ರಕ್ಷಾ ಬಂಧನದ ಸಂದರ್ಭದಲ್ಲಿ ಆರಂಭಿಸಲಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಈ ವರ್ಷವೂ ಆಗಸ್ಟ್ 27ರಿಂದ 29ರವರೆಗೆ ಲಭ್ಯವಿರಲಿದೆ. ಇದರಿಂದ ಮಹಿಳೆಯರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಕ್ಷಣಾ ಪಡೆಗಳು, ಪೊಲೀಸ್ ಸಿಬ್ಬಂದಿ ಹಾಗೂ ವಿಪತ್ತು ಪರಿಹಾರ ಕಾರ್ಯಕರ್ತರಿಗೆ ರಾಖಿ ಕಟ್ಟಿ ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವಂತೆಯೂ ಯೋಗಿ ಜನತೆಗೆ ಕರೆ ನೀಡಿದರು.
ಸ್ಥಳೀಯವಾಗಿ ತಯಾರಿಸಲಾದ ರಾಖಿ ಹಾಗೂ ಉಡುಗೊರೆಗಳಿಗೆ ಆದ್ಯತೆ ನೀಡುವಂತೆ ಅವರು ಮನವಿ ಮಾಡಿದರು. ಇದರಿಂದ ಸ್ಥಳೀಯ ಕಾರ್ಮಿಕರು, ಕುಶಲಕರ್ಮಿಗಳು ಮತ್ತು ಉದ್ಯಮಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಸ್ವಾವಲಂಬಿ ಹಾಗೂ ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶ ನಿರ್ಮಾಣದ ಸಂಕಲ್ಪ ಮತ್ತಷ್ಟು ಬಲಪಡಲಿದೆ ಎಂದು ಅವರು ಹೇಳಿದರು.
ರಾಜ್ಯದ ಜನತೆಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿ, ಪ್ರತಿಯೊಬ್ಬ ಸಹೋದರಿ ಮತ್ತು ಮಗಳನ್ನು ಗೌರವಿಸಿ, ರಕ್ಷಿಸುವ ಪ್ರತಿಜ್ಞೆಯನ್ನು ತಮ್ಮ ನಡವಳಿಕೆಯ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವಂತೆ ಮತ್ತೊಮ್ಮೆ ಕರೆ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 