ಆಧುನಿಕ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯ ಹೊಂದಲು ಯೋಗಾಭ್ಯಾಸ ಅಗತ್ಯ:ಪ್ರಹ್ಲಾದ ಜೋಶಿ

ಆಧುನಿಕ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯ ಹೊಂದಲು ಯೋಗಾಭ್ಯಾಸ ಅಗತ್ಯ:ಪ್ರಹ್ಲಾದ ಜೋಶಿ Yoga practice is essential for good health in modern lifestyle: Prahlada Joshi

ಬೆಳಗಾವಿ 21  : ಯೋಗಾಸನ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ಹೊಂದಿದ್ದು, ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ನಮ್ಮ ಶರೀರದಲ್ಲಿನ ರೋಗ ರುಜಿನಗಳನ್ನು ದೂರ ಮಾಡಿಕೊಳ್ಳುವುದರ ಜೊತೆಗೆ ಮನಸ್ಸನ್ನು ಸಮಚಿತ್ತದಿಂದ ಇಟ್ಟುಕೊಳ್ಳಬಹುದಾಗಿದೆ ಎಂದು ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಬೆಳಗಾವಿ ಹಾಗೂ ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ರವಿವಾರ(ಜೂ.21) ಸುವರ್ಣ ವಿಧಾನ ಸೌಧದಲ್ಲಿ ಜರುಗಿದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬದಲಾಗುತ್ತಿರುವ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಭಾರತದ ಪ್ರಾಚೀನ ಪದ್ಧತಿಯಾದಂತಹ ಯೋಗಾಸನ ಮಾಡುವುದು ಅತೀ ಅವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು. ಸ್ಪರ್ಧಾತ್ಮಕ ಜಿವನ ಶೈಲಿಯಲ್ಲಿ  ನಮ್ಮ ನಿತ್ಯದ ಕೆಲಸದಲ್ಲಿ ನಿಪುಣತೆಯನ್ನು ಸಾಧಿಸಲು  ಯೋಗಾಸನ ಅಗತ್ಯವಾಗಿದ್ದು ಯೋಗಾಸನ ಮಾಡಲು ಸರಿಯಾದ ಆಸನದ ಜ್ಞಾನ ಹೊಂದುವುದು ಕೂಡಾ ಅಷ್ಟೇ ಪ್ರಮುಖವಾಗಿದೆ.

ವೇದ ಉಪನಿಷತ್ತುಗಳ ಪ್ರಕಾರ ಜೂನ್ 21 ನೇ ದಿನ ಪ್ರಾಮುಖ್ಯತೆಯನ್ನು ಹೊಂದಿದ ದಿನವಾದ್ದರಿಂದ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗಾಸನವನ್ನು 140 ಕ್ಕೂ ಹೆಚ್ಚಿನ ದೇಶಗಳು ಒಪ್ಪಿಕೊಂಡಿವೆ. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರಪಂಚದ ಯಾವುದಾದರೂ ಒಂದು ಪ್ರದೇಶದಲ್ಲಿ ಯೋಗಾಭ್ಯಾಸ ಜರುಗುತ್ತಿರುವುದರಿಂದ   ಯೋಗಾಸನಕ್ಕೆ ಗೋಲ್ಡನ್ ರಿಂಗ್ ಎಂದು ಕರೆಯಲಾಗುತ್ತದೆ ಎಂದರು.