ಬರ್ಬರವಾದ ಬದುಕಿಗೆ ಯೋಗ ಬೆಳಕಾಗಿ ಕಾಣುತ್ತಿದೆ : ಸಚಿವ ತಿಮ್ಮಾಪುರ

ಬರ್ಬರವಾದ ಬದುಕಿಗೆ ಯೋಗ ಬೆಳಕಾಗಿ ಕಾಣುತ್ತಿದೆ : ಸಚಿವ ತಿಮ್ಮಾಪುರ Yoga is seen as a light for a barbaric life: Minister Thimmapura

ಮಹಾಲಿಂಗಪುರ 21: ದೇಶ ವಿದೇಶಗಳು ಅನುಕರಿಸುತ್ತಿರುವ ಹಾಗೂ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ ನಮ್ಮ ಯೋಗ ಮತ್ತು ಅದನ್ನು ಕೊಟ್ಟ ನಮ್ಮ ಋಷಿ ಮುನಿಗಳು ನಮ್ಮ ಹೆಮ್ಮ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. 

ಸಮೀಪದ ನಾಗರಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಗ್ರಾಪಂ, ಶಾಲಾ ಕಾಲೇಜು ಒಕ್ಕೂಟ, ಮಾಧವಾನಂದ ಶಾಲೆ ಸಂಯುಕ್ತಾಶ್ರಯದಲ್ಲಿ ವತಿಯಿಂದ ಜರುಗಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾರ್ಥ ಮತ್ತು ಹಣದ ಲಾಲಸೆಯಿಂದ ಹಾಲು, ಹಣ್ಣು, ತರಕಾರಿಗಳನ್ನು ವಿಷಯುಕ್ತ ಮಾಡುತ್ತಿರುವುದರಿಂದ ಪರಿಸ್ಥತಿ ಹತೋಟಿ ಮೀರುತ್ತಿದೆ, ಬದುಕು ಬರ್ಭರವಾಗುತ್ತಿದೆ, ಇದರಿಂದ ಶೇ.30 ರಷ್ಟು ಜನರಿಗೆ ಕ್ಯಾನ್ಸರ್ ಆವರಿಸಿದೆ, ವಿದೇಶಗಳು ಇನ್ನೂ ಸಂಕಷ್ಟದಲ್ಲಿವೆ. ಯೋಗ ಮಾತ್ರ ಈಗ ಬೆಳಕಾಗಿ ಕಾಣುತ್ತಿದೆ ಎಂದ ಅವರು ಕ್ಯಾನ್ಸರ್ ತಜ್ಞೆ ಪದ್ಮಶ್ರೀ ಪುರಸ್ಕೃತೆ ಡಾ. ವಿಜಯಲಕ್ಷ್ಮೀ ದೇಶಮಾನೆಯವರಲ್ಲಿ ಪರಿಹಾರಕ್ಕಾಗಿ ಮನವಿ ಮಾಡಿ, ಸಾಧಕಿ ವಿಜಯಲಕ್ಷ್ಮೀಯವರನ್ನು ಕರೆಸಿರುವ ಆರ್‌.ಟಿ.ಪಾಟೀಲರ ಕಾರ್ಯ ಶ್ಲಾಘನೀಯ ಎಂದರು. 

ರೈತ ಮುಖಂಡ ಸುಭಾಸ್ ಶಿರಬೂರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ನನಗೂ ಸಾರಾಯಿ ಬಂದ್ ಮಾಡುವ ಯೋಚನೆ ಬಂದಿದೆ, ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ, ಆಂದ್ರ, ಕೇರಳ ರಾಜ್ಯಗಳು ಸಾರಾಯಿ ಬಂದ್ ಮಾಡಿ ಮತ್ತೆ ಆದೇಶ ಹಿಂಪಡೆಯುವಂಥ ಪರಿಸ್ಥಿತಿ ಬಂತು ಹಾಗಾಗಿ ನಾವು ಎಚ್ಚರಿಕೆಯ ಹೆಜ್ಜೆ ಇಡಬೇಕು, ರಾಷ್ಟ್ರ ಮಟ್ದದಲ್ಲಿ ಸಾರಾಯಿ ಬಂದ್ ಆಗುವುದೇ ಇದಕ್ಕೆ ಪರಿಹಾರ ಎಂದರು. 

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕ್ಯಾನ್ಸರ್ ತಜ್ಞೆ ಪದ್ಮಶ್ರೀ ಪುರಸ್ಕೃತೆ ಡಾ. ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ಯೋಗ ರಾಜ ವಿದ್ಯೆ. ಯೋಗಿ ಪತಂಜಲಿ ಪರಿಚಯಿಸಿದರು, ಪ್ರಧಾನಿ ಮೋದಿ ಮನೆಮನೆಗೂ ತಲುಪಿಸುತ್ತಿದ್ದಾರೆ.ಗಳಿಸಿದ್ದೆಲ್ಲಾ ವೈದ್ಯರಿಗೆ ಹೋಗದಿರಲು ಯೋಗ ಪರಿಹಾರ, ಸಾತ್ವಿಕ ಆಹಾರ ಅನಿವಾರ್ಯ. ನಮ್ಮ ಹಾಗೂ ದೇಶದ ಅದೃಢತೆಗಾಗಿ ನಿತ್ಯ ಯೋಗ ಅಗತ್ಯ ಎಂದರು. 

ಕೊಂಚೂರ ಸವಿತಾ ಪೀಠದ ಸವಿತಾನಂದ ಸ್ವಾಮೀಜಿ ಆಶಿರ್ವಚನ ನೀಡಿ, ಕರ್ನಾಟಕದಲ್ಲಿ 2010ರಲ್ಲಿ 16 ಸಾವಿರವಿದ್ದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಈಗ 9 ಲಕ್ಷ ದಾಟಿದೆ ಇದು 90 ಲಕ್ಷ ತಲುಪಲು ಹೆಚ್ಚು ಸಮಯ ಬೇಕಿಲ್ಲ. ಒಂದು ವರ್ಷ ನಿರಂತರ ಹಸುವಿನ ಹಾಲು ಕುಡಿದರೆ ಕ್ಯಾನ್ಸರ್ ನಿರ್ಮೂಲನೆಯಾಗುತ್ತದೆ ಹಾಗಾಗಿ ನತ್ಯ ಹಸುವಿನ ಹಾಲು ಕುಡಿಯೋಣ ಎಂದರು. 

ವಿಜಯಲಕ್ಷ್ಮೀಯವರ ಅಬಲಾಶ್ರಮಕ್ಕೆ ಆರ್‌.ಟಿ.ಪಾಟೀಲ 1 ಲಕ್ಷ ರೂ.ದೇಣಿಗೆ ನೀಡಿದರು. 

ಮಾಧವಾನಂದ ಸಸಂ. ಹಾಗೂ ಶಾಲಾ ಕಾಲೇಜು ಒಕ್ಕೂಟಗಳ ಅಧ್ಯಕ್ಷ ಆರ್‌.ಟಿ.ಪಾಟೀಲ ಅಧ್ಯಕ್ಷತೆ ವಹಿಸಿ, ಗ್ರಾಪಂ ಅಧ್ಯಕ್ಷೆ ಪಾರ್ವತಿ ತೇಲಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಎಸ್‌ಪಿ ಪ್ರಸನ್ನಕುಮಾರ ದೇಸಾಯಿ, ಜಿಪಂ ಉಪಕಾರ್ಯದರ್ಶಿ ಎನ್‌.ವೈ.ಬಸರಿಗಿಡದ, ಜಿಲ್ಲಾ ಆಯುಷ್ ಅಧಿಕಾರಿ ಶೇಖರಯ್ಯ ಮಠ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಎಸಿ ಶ್ವೇತಾ ಬೀಡಿಕರ, ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಪಂ ಅಧಿಕಾರಿ ಉಕ್ಕಲಿ, ಡಿವೈಎಸ್ಪಿ ಸೈಯದ್ ಜಮೀರ್ ರೋಷನ್, ತಹಶಿಲ್ದಾರ್ ಮಹಾದೇವ ಸಣಮುರಿ, ತಹಶಿಲ್ದಾರ್ ಸದಾಶಿವ ಮಕ್ಕೋಜಿ, ತಾಪಂ ಇಒ ಉಮೇಶ ಸಿದ್ನಾಳ, ಸಮಾಜ ಕಲ್ಯಾಣ  ಸಹಾಯಕ ನಿರ್ದೇಶಕ ಮೋಹನ್ ಕೋರಡ್ಡಿ, ಸಿಪಿಐ ಮಹಾದೇವ ಶಿರಹಟ್ಟಿ, ಬಿಇಒ ಎಸ್‌.ಎಂ.ಮುಲ್ಲಾ, ಪ್ರತ್ರಕರ್ತ ನಾರಾಯಣಗೌಡ ಉತ್ತಂಗಿ, ಅಶೋಕ ಕಿವುಡಿ, ಡಾ.ಶಿವಾನಂದ ಕುಬಸದ, ರಮೇಶ ನಿಡೋಣಿ ಇತರರಿದ್ದರು.ಶಿಕ್ಷಕ ಎನ್‌.ಎಸ್‌.ನಾಗ್ವೇಕರ್ ಮತ್ತು ರಾಘವೇಂದ್ರ ನೀಲನ್ನವರ ಯೋಗ ಮಾರ್ಗದರ್ಶನ ಮಾಡಿದರು. ಒಕ್ಕೂಟಗಳ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಹುನ್ನೂರ ನಿರೂಪಿಸಿದರು.