ದಾವೋಸ್ ನಲ್ಲಿ ಜಾಗತಿಕ ಗಣ್ಯರು ಭಾಗಿ, ಗಮನಸೆಳೆಯುತ್ತಿರುವ ಯಡಿಯೂರಪ್ಪ

ದಾವೋಸ್, ಜ 21 :        ಜಾಗತಿಕವಾಗಿ ಅತ್ಯಂತ ಮಹತ್ವ ಪಡೆದಿರುವ ವಿಶ್ವ ಆರ್ಥಿಕ ವೇದಿಕೆಯ ೫೦ನೇ ವಾರ್ಷಿಕ ಸಭೆ ಸ್ವಿಡ್ಜರ್ಲೆಂಡ್‌ನ ದಾವೋಸ್‌ನಲ್ಲಿ ಇಂದು ಆರಂಭಗೊಳ್ಳಲಿದೆ. ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ರಾಷ್ಟ್ರಗಳ ಒಕ್ಕೂಟವಾದ ಈ ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ಮ ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಸೇರಿದಂತೆ ದೇಶದ 100 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಎಂದಿನ ಬಿಳಿ ಬಣ್ಣದ ಕುರ್ತಾ ಪೈಜಾಮ ಬದಲಿಗೆ ಸೂಟು ಬೂಟಿನೊಂದಿಗೆ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ತರುವ ನಿರೀಕ್ಷೆ ಮೂಡಿಸಿದ್ದಾರೆ. 

ಸಮಾವೇಶದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ವಿವಿಧ ಜಾಗತಿಕ ಗಣ್ಯರೊಂದಿಗೆ ನಿರಂತರವಾಗಿ ಮಾತುಕತೆಯಲ್ಲಿ ತೊಡಗಿದ್ದಾರೆ. ಬಿಡುವಿನ ಸಮಯದಲ್ಲಿ ನಿನ್ನೆ ದಾವೋಸ್ ನ ಬೀದಿಗಳಲ್ಲಿ ಸೂಟು, ಬೂಟು, ಟೋಪಿ, ಕೈಗವಸು ತೊಟ್ಟು ವಾಯು ವಿಹಾರ ಮಾಡಿದರು.ಈ ಕುರಿತಾದ ಪೋಟೋ ದೊಡ್ಡಮಟ್ಟದಲ್ಲಿ ವೈರಲ್ ಆಗಿದೆ. ಯಡಿಯೂರಪ್ಪ ಅವರು ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿದ್ದಾರೆ. 

ದಾವೋಸ್ ಸಮಾವೇಶದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿಯೋಗ ಭಾಗವಹಿಸಿದೆ.   

ವಿಶ್ವ ಆರ್ಥಿಕ ವೇದಿಕೆ ಸಂಸ್ಥಾಪಕ ಹಾಗೂ ಕಾರ್ಯಕಾರಿ ಅಧ್ಯಕ್ಷ ಕ್ಲಾವೂಸ್ ಸ್ಚವಾಬ್ ಕಳೆದ ರಾತ್ರಿ ಜಾಗತಿಕ ನಾಯಕರನ್ನು ಸ್ವಾಗತಿಸುವ ತನ್ನ ಸಂದೇಶದಲ್ಲಿ ಜಗತ್ತಿನ ಪ್ರಮುಖ ಮುಖಂಡರು ಯುವ ಸಮೂಹವನ್ನು ರಚಿಸಿರುವುದು ತಮಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. 

ವಾರ್ಷಿಕ ಸಮಾರಂಭ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ನಡೆಯಲಿದ್ದು, ಬಾಲಿವುಡ್ ನಟಿ ದೀಪಿಕಾ ಪಡಕೋಣೆ ಸಹ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.  

ಎಲ್ಲವನ್ನೊಳಗೊಂಡ ಹಾಗೂ ಸುಸ್ಥಿರ ಬದಲಾವಣೆಗೆ ಕಾರಣರಾದ ಸಾಂಸ್ಕೃತಿಕ ನಾಯಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ದೊರೆ ಚಾರ್ಲ್ಸ್, ಜರ್ಮನ್ ಚಾನ್ಸೆಲರ್ ಎಂಜಿಲಾ ಮಾರ್ಕೆಲ್ ಸೇರಿದಂತೆ ಮತ್ತಿತರ ಗಣ್ಯರು ಈ ವೇದಿಕೆಯಲ್ಲಿ ಭಾಗಿಯಾಗಲಿದ್ದಾರೆ.