ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ: ಎಚ್.ಡಿ.ಕುಮಾರಸ್ವಾಮಿ ಲೇವಡಿ

ಬೆಂಗಳೂರು, ಸೆ 8      ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆಗೆ ಕರೆದೊಯ್ಯಲು ಸಾಧ್ಯವಾಗದ ಬಿ.ಎಸ್. ಯಡಿಯೂರಪ್ಪ ಒಬ್ಬ ದುರ್ಬಲ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ರಾಜ್ಯದಲ್ಲಿ ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದ್ದರೂ ಪ್ರಧಾನಿಯಾಗಲೀ ಬಿಜೆಪಿಯ ನಾಯಕರಾಗಲೀ ಗಮನ ಹರಿಸಿಲ್ಲ. ಕೇಂದ್ರ ಸರ್ಕಾರದಿಂದ ಪರಿಹಾರ ಕೇಳಲು ಈ ನಾಯಕರಿಗೆ ಗಟ್ಟಿಧ್ವನಿಯಿಲ್ಲದಿರುವುದು, ಮುಖ್ಯಮಂತ್ರಿಗಳು ದುರ್ಬಲರಾಗಿರುವುದು ನಮ್ಮ ರಾಜ್ಯದ ದುದರ್ೆವ ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಚಂದ್ರಯಾನ-2 ವೀಕ್ಷಣೆಗೆ ಬೆಂಗಳೂರಿಗೆ ನರೇಂದ್ರ ಮೋದಿ ಬಂದು ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು ಸ್ವಾಗತಾರ್ಹ. ಆದರೆ ನೆರೆಯಿಂದ ತತ್ತರಿಸಿ ಬೀದಿಗೆ ಬಿದ್ದಿರುವ ಸಾವಿರಾರು ಕುಟುಂಬಗಳು, ಮಕ್ಕಳನ್ನು ತಿರುಗಿಯೂ ನೋಡದೇ ಕೇಂದ್ರದಿಂದ ಪರಿಹಾರವನ್ನೂ ಘೋಷಿಸದೇ ಹಾಗೆಯೇ ತೆರಳಿದ್ದು ನೋವಿನ ಸಂಗತಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಗರ ಪ್ರದಕ್ಷಿಣೆಯನ್ನು ಟೀಕಿಸಿರುವ ಅವರು, ಯಡಿಯೂರಪ್ಪ ಹಾಗೂ ಸಚಿವರು ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಬೀದಿಗೆ ಬಿದ್ದಿರುವ ಬಡ ಕುಟುಂಬಗಳೊಂದಿಗೆ ಕುಳಿತು ಪರಿಹಾರ ಕಾರ್ಯಗಳ ಪರಿಶೀಲನೆ ಮಾಡಬೇಕಾದ ಸಂದರ್ಭದಲ್ಲಿ ನಗರ ಪರಿವೀಕ್ಷಣೆ ಎಂಬ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.