ಪುಣ್ಯ ಸ್ಮರಣೋತ್ಸವ ಹಾಗೂ ಧರ್ಮ ಸಭೆ: ತನ್ನನ್ನು ತಾನು ತಿಳಿದುಕೊಂಡಾಗ ಮನುಷ್ಯ ಮಹದೇವನಾಗಲು ಸಾಧ್ಯ; ಶ್ರೀಗಳು

ಬೈಲಹೊಂಗಲ 08:  ಹುರುಳಿಲ್ಲದ ಸಂಸಾರವನ್ನು ನೆಚ್ಚಿ ಕೆಡಬೇಡ. ಜೀವನದಲ್ಲಿ ಶಾಶ್ವತವಾದದ್ದು ಯಾವುದೆಂದರೆ ಸದ್ಗುರುನಾಥನ ಶ್ರೀಚರಣ, ಎಂಬ ದಿವ್ಯ ಸಂದೇಶವಾಗಿದೆ ಎಂದು ಕಿಲ್ಲಾತೊರಗಲ್ಲದ ಗಚ್ಚಿನಹಿರೇಮಠದ ಚನ್ನಮಲ್ಲಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

   ಯಕ್ಕುಂಡಿ ಗ್ರಾಮದ ಕುಮಾರೇಶ್ವರ ವಿರಕ್ತಮಠದಲ್ಲಿ ಲಿಂ ಶಿವಲಿಂಗೇಶ್ವರ, ಮುರಘೇಂದ್ರ ಸ್ವಾಮಿ, ವಿರೂಪಾಕ್ಷ ಸ್ವಾಮಿಗಳ 119 ನೇ ಪುಣ್ಯ ಸ್ಮರಣೋತ್ಸವ ಹಾಗೂ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿ, ಮನಕುಲದ ಅಭ್ಯುದಯ ಮತ್ತು ಮನುಕುಲದ ಏಳ್ಗೆಗಾಗಿ ಮಾನವರಾಗಿ ಮಾನವತೆಯಿಂದ ಬಾಳಿದಾಗ ಮಾತ್ರ ಒಳ್ಳೆಯ ಜೀವನ ನಡೆಸಲು ಸಾದ್ಯ. ಮನುಷ್ಯ ತನ್ನನ್ನು ತಾನು ತಿಳಿದುಕೊಂಡಾಗ ಮಾತ್ರ ಮಹದೇವನಾಗಲು ಸಾದ್ಯ. ಇಂದು ಮನುಷ್ಯನ ಮನಸ್ಸನ್ನು ದೇವನಡೆಗೆ ಒಯ್ಯುವಂತ ಮಾರ್ಗಸೂಚಿಗಳನ್ನು ಮಠಮಾನ್ಯಗಳು ಮಾಡುತ್ತಿವೆ.  ಲಿಂಗೈಕ್ಯ ಶ್ರೀಗಳು ಭಕ್ತರಿಗೆ ಅಮೋಘವಾದ ಕಾರ್ಯಗಳನ್ನು ಮಾಡಿ ಭಕ್ತರನ್ನು ಉದ್ಧರಿಸಿದ ಮಹಾ ಮಹಿಮರಾಗಿದ್ದಾರೆ. ಮನುಷ್ಯನ ಮನಸ್ಸಿಗೆ ಶಾಂತಿ ನೆಮ್ಮದಿಗಳು ಸಿಗಬೇಕೆಂದರೆ  ಮಠ ಮಾನ್ಯಗಳಲ್ಲಿ ಮಾತ್ರ ಸಾದ್ಯವೆಂದು ತಿಳಿಸಿದರು. 

   ಕಾರ್ಯಕ್ರಮದ ನೇತೃತ್ವವನ್ನು ಸವದತ್ತಿಯ ಸ್ವಾದಿಮಠದ ಶಿವಬಸವ ಮಹಾಸ್ವಾಮಿಗಳು ವಹಿಸಿದ್ದರು. ಧರ್ಮಸಭೆಯ ಅದ್ಯಕ್ಷತೆಯನ್ನು ಕಡಕೋಳದ ಸಚ್ಚಿದಾನಂದ ಮಹಾಸ್ವಾಮಿಗಳು ವಹಿಸಿದ್ದರು. ಉಗರಗೋಳ ಮಹಾಂತ ಮಹಾಸ್ವಾಮಿಗಳು, ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು, ಚಿತ್ತಾಪೂರದ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು, ಶಿರಕೋಳದ ಗುರುಶಿದ್ದ ಶಿವಾಚಾರ್ಯ ಸ್ವಾಮಿಗಳು, ಯಕ್ಕುಂಡಿಯ ಕುಮಾರೇಶ್ವರ ಸಂಸ್ಥಾನ ವಿರಕ್ತಮಠದ ಪಂಚಾಕ್ಷರ ಮಹಾಸ್ವಾಮಿಗಳ ಮಾತನಾಡಿದರು.

    ಬಯಲು ಕಣದ ಜಂಗಿ ಕುಸ್ತಿಗಳು  ಜರುಗಿದವು. ಮುರುಘೇಂದ್ರ ಶಿವಯೋಗಿಗಳ ಭವ್ಯವಾದ ಬೆಳ್ಳಿ ರಥೋತ್ಸವ ಮತ್ತು ಕುಂಭೋತ್ಸವ  ಮಠದಿಂದ ಸಕಲ ಬಿರುದಾವಳಿ, ವಾದ್ಯ ವೈಭವಗಳೊಂದಿಗೆ  ಸುಮಂಗಲೆಯರ ಆರತಿಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಯಿತು.  ಶಂಭುಲಿಂಗ ಶಾಸ್ತ್ರೀಗಳಿಂದ ಯಡಿಯೂರು ಶಿದ್ದಲಿಂಗೇಶ್ವರರ ಪವಿತ್ರ ಜೀವನ ತತ್ವ ಕುರಿತು ಪ್ರವಚನ ಜರುಗಿತು. ಸಿದ್ದಾರೂಢ ಗವಾಯಿಗಳು ಮತ್ತು ಶಿವಪುತ್ರಪ್ಪ ಬಿದನೂರ ಇವರಿಂದ ಸಂಗೀತ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮ ನಡೆಯಿತು.             

ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ ,ಕಾರ್ಲಕಟ್ಟಿ ತಾಂಡೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ನಾಗರಿಕರು ಪಾಲ್ಗೊಂಡಿದ್ದರು.