ಯಾದಗಿರಿ: ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಯಾದಗಿರಿ,  ಮೇ 12,ಗುಜರಾತ್‍ನ ಅಹಮದಾಬಾದ್ ನಗರದಿಂದ ಹಸಿರು ವಲಯದಲ್ಲಿದ್ದ  ಯಾದಗಿರಿ ಜಿಲ್ಲೆಗೆ ಆಗಮಿಸಿರುವ 2 ಜನರಲ್ಲಿ ಕೋವಿಡ್-19 ಪಾಸಿಟಿವ್ ವರದಿಯಾಗಿದೆ ಎಂದು  ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸುರಪುರ  ತಾಲ್ಲೂಕಿನ 3 ಜನ ಗುಜರಾತ್ ರಾಜ್ಯದ ಅಹಮದಾಬಾದ್ ನಗರಕ್ಕೆ ಮಾರ್ಚ್ ತಿಂಗಳಲ್ಲಿ  ತೆರಳಿರುತ್ತಾರೆ. ಇವರು ಲಾಕ್‍ಡೌನ್ ಪ್ರಯುಕ್ತ ತಮ್ಮ ದೂರದ ಸಂಬಂಧಿಕರ ಮನೆಯಲ್ಲಿ  ವಾಸವಾಗಿದ್ದು, ದಿನಾಂಕ: 09.05.2020ರಂದು ಒಂದು ಲಾರಿಯ ಮೂಲಕ ಬಾಗಲಕೋಟೆ ಜಿಲ್ಲೆಯ  ಹುನಗುಂದ ತಾಲ್ಲೂಕಿನ ಹೈವೇ ರಸ್ತೆಯಲ್ಲಿ ಬಂದಿಳಿದಿದ್ದಾರೆ. ಅಲ್ಲಿಂದ ಕಾರಿನ ಮೂಲಕ  ಸುರಪುರ ತಾಲ್ಲೂಕಿನ ಜ್ವರ ತಪಾಸಣಾ ಕೇಂದ್ರಕ್ಕೆ ನೇರವಾಗಿ ಆಗಮಿಸಿದ್ದಾರೆ. ಈ 3  ಜನರ ಹಾಗೂ ಒಬ್ಬ ವಾಹನ ಚಾಲಕನ ಆರೋಗ್ಯ ತಪಾಸಣೆ ಕೈಗೊಂಡು, ಗಂಟಲಿನ ದ್ರವವನ್ನು  ಸಂಗ್ರಹಿಸಿ, ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್‍ನಲ್ಲಿ ಪ್ರತ್ಯೇಕವಾಗಿ ಅವಲೋಕನೆಗಾಗಿ  ಇರಿಸಲಾಗಿದೆ. ದಿನಾಂಕ:09.05.2020ರಂದು ಈ 4 ಜನರ ಗಂಟಲಿನ ದ್ರವವನ್ನು  ಕೋವಿಡ್-19 ಪರೀಕ್ಷೆಗಾಗಿ ಕಲಬುರಗಿಗೆ ಕಳುಹಿಸಲಾಗಿದ್ದು, ಇವರ ಪೈಕಿ ಇಬ್ಬರಿಗೆ ಪಾಸಿಟಿವ್ ವರದಿಯಾಗಿದ್ದು, ಇನ್ನುಳಿದ ಇಬ್ಬರದ್ದು ನೆಗೆಟಿವ್ ವರದಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಕಾರಾತ್ಮಕ  ಪ್ರಕರಣಗಳಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುವ  ಕಾರ್ಯ ಪ್ರಗತಿಯಲ್ಲಿರುತ್ತದೆ. ಜಿಲ್ಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು  ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆತಂಕ ಪಡಬಾರದು ಎಂದು ಅವರು ಕೋರಿದ್ದಾರೆ.
ಕೋವಿಡ್-19  ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ  ಆರೋಗ್ಯದ ಹಿತದೃಷ್ಟಿಯಿಂದ ಹೊರ ರಾಜ್ಯದಿಂದ ಆಗಮಿಸುತ್ತಿರುವ ವಲಸೆಗಾರರಿಗೆ  ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್/ ಹಾಸ್ಟೆಲ್/ ಶಾಲೆಗಳಲ್ಲಿ ಕಡ್ಡಾಯವಾಗಿ 14 ದಿನಗಳ  ಅವಲೋಕನೆಗಾಗಿ ಇರಿಸಲಾಗುತ್ತಿದೆ. ಹೊರ ರಾಜ್ಯಗಳಿಂದ ಬಂದ ವಲಸೆಗಾರರು ನೇರವಾಗಿ ತಮ್ಮ  ಸ್ವಗ್ರಾಮಕ್ಕೆ ಹೋಗಬಾರದು. ಒಂದು ವೇಳೆ ತೆರಳಿದರೆ ಅಂತಹವರ ಬಗ್ಗೆ ಮಾಹಿತಿ ನೀಡಲು  ಮತ್ತು ಜಿಲ್ಲೆಯನ್ನು ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಜಿಲ್ಲಾಡಳಿತ  ಪ್ರಯತ್ನದಲ್ಲಿ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.ದಿನಾಂಕ:11.05.2020ರ  ಮಧ್ಯರಾತ್ರಿಯಿಂದ ದಿನಾಂಕ:12.05.2020ರ ಮಧ್ಯರಾತ್ರಿಯವರೆಗೆ ಸಾರ್ವಜನಿಕರ ವೈದ್ಯಕೀಯ  ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ, ಜಿಲ್ಲೆಯಾದ್ಯಂತ 144 ಸಿ.ಆರ್.ಪಿ.ಸಿ ಘೋಷಣೆ  ಮಾಡಲಾಗಿರುತ್ತದೆ. ಮುಂದಿನ ದಿನದಲ್ಲಿ ಅಂಗಡಿ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಂಡು  ವ್ಯಾಪರ ನಡೆಸದೇ ಇದ್ದಲ್ಲಿ, ಅಂತಹವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಂಡು  ಪರವಾನಗಿ ರದ್ದುಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.