ಹಾಸ್ಯ ಭಾಷಣಕ್ಕಿಂತ ಹಾಸ್ಯ ಬರವಣಿಗೆ ತುಂಬ ಕಷ್ಟ: ವಿಜಯಕುಮಾರ ನೇರ್ಲೇಕರ

ಹಾಸ್ಯ ಭಾಷಣಕ್ಕಿಂತ ಹಾಸ್ಯ ಬರವಣಿಗೆ ತುಂಬ ಕಷ್ಟ: ವಿಜಯಕುಮಾರ ನೇರ್ಲೇಕರ  Writing humor is much more difficult than speaking humor: Vijayakumar Nerlekar


ಬೆಳಗಾವಿ 11:  ಹಾಸ್ಯ ಭಾಷಣಕ್ಕಿಂತ ಹಾಸ್ಯ ಬರವಣಿಗೆ ತುಂಬ ಕಷ್ಟ. ಆಂಗಿಕ ಭಾಷೆ, ಹಾವಭಾವಗಳಿಂದ ನಮ್ಮ ಪ್ರಸಂಗಗಳನ್ನು ಹೇಳುವುದರೊಂದಿಗೆ ಕೇಳುಗನರನ್ನು ರಂಜಿಸಬಹುದಾದರೂ ಬರವಣಿಗೆ ಮೂಲಕ ಜನರನ್ನ ನಗಿಸುವುದು ತುಂಬ ಕಷ್ಟದ ಕೆಲಸವೆಂಬುದು ನನ್ನ ಅನ್ನಿಸಿಕೆ ಎಂದು ಲೇಖಕ ವಿಜಯಕುಮಾರ ನೇರ್ಲೇಕರರ ಇಂದಿಲ್ಲಿ ಹೇಳಿದರು.  

ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಲೇಖಕ ವಿಜಯಕುಮಾರ ನೇರ್ಲೇಕರರ ‘ನೋಟಿ’ ನ್ಯಾಗ ನಗೆಯ ಬೀರಿ’ (ಬ್ಯಾಂಕಿನ ರಸಪ್ರಸಂಗಗಳ ಸಂಕಲನ) ಕೃತಿ ಬಿಡುಗಡೆ ಮತ್ತು “ಹೊಸ ವರುಷ ಹಳೆ ನಗೆನೆನಪು” ಕಾರ್ಯಕ್ರಮವನ್ನು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಿನ್ನೆ ದಿ. 10 ಶನಿವಾರದಂದು ಹಮ್ಮಿಕೊಂಡಿದ್ದರು.   

ವಿಜಯಕುಮಾರ ಅವರು ಹಾಸ್ಯದಿಂದ ದೂರವಿದ್ದ ನನ್ನನ್ನು ಹತ್ತಿರ ತರಲು ಈ ಕೃತಿ ಹೊರಬರಲು ಹಾಸ್ಯಕೂಟವೇ ಕಾರಣವೆಂದು ಹೇಳಿದರು.  

ಕೃತಿಯನ್ನು ಪರಿಚಯಿಸಿದ ಡಾ. ಅಡಿವೆಪ್ಪ ಇಟಗಿಯವರು ಮಾತನಾಡುತ್ತ ಗ್ರಾಮೀಣ ಭಾಗದ ಮುಗ್ಧ ಜನರ ಬದುಕು, ಅವರ ಮನಸ್ಸು, ಮಾನವೀಯ ಮಿಡಿತಗಳನ್ನು ಲೇಖಕರು ತಮ್ಮ ಬರವಣಿಗೆಗಳ ವಸ್ತುಗಳಾಗಿಸಿಕೊಂಡಿದ್ದಾರೆ. ನವಿರಾದ ಹಾಸ್ಯಗಳೊಂದಿಗೆ ಓದುಗರಿಗೆ ನೀಡಿದ್ದಾರೆ.ವಿಜಯಕುಮಾರ ಅವರ ಬರಹಗಳು ಓದುಗರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು.  

ಕೃತಿಯನ್ನು ಬಿಡುಗಡೆಗೊಳಿಸಿದ ನಗೆಬರೆಹಗಾರ ಗುಂಡೇನಟ್ಟಿ ಮಧುಕರ ಅವರು ಮಾತನಾಡಿ ನನಗೆ ಹಾಸ್ಯ, ಹಾಸ್ಯ ಲೇಖಕರೆಂದರೆ ತುಂಬ ಪ್ರೀತಿ, ಅಭಿಮಾನ. ಈ ಕೃತಿಯನ್ನು ಹಾಸ್ಯ ಸಾಹಿತ್ಯ ಲೋಕಕ್ಕೆ ನೀಡುವುದರ ಮೂಲಕ ನಗೆಬರೆಹಗಾರರ ಮತ್ತೊಂದು ಸಂಖ್ಯೆಯನ್ನು ಹೆಚ್ಚಿಸಿರುವ ಲೇಖಕ ವಿಜಯಕುಮಾರ ನೇರ್ಲೇಕರ ನನಗೀಗ ಮೊದಲಿಗಿಂತಲೂ ಹತ್ತಿರವಾಗಿದ್ದಾರೆ. ಇವರಿಂದ ಇನ್ನೂ ಹೆಚ್ಚೆಚ್ಚು ಹಾಸ್ಯಕೃತಿಗಳು ಹೊರಬರಲಿ ಎಂದು ಹೇಳಿದರು.  

ಲೇಖಕ ವಿಜಯಕುಮಾರ ನೇರ್ಲೇಕರರಿಗೆ ತಲೆಗೆ ಪೇಟ ಹಾಕಿ, ಶಾಲು ಹೊದಸಿ ಮಾಲೆ ಹಾಕಿ  ಸನ್ಮಾನಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗೆಮಾತುಗಾರ ಪ್ರೊ. ಜಿ. ಕೆ. ಕುಲಕರ್ಣಿ ಹಾಗೂ ನವಲೂರ ತಾನಾಜಿ, ಭರತೇಶ ಪಾರೀಸ ಹಿತ್ತಲಕೇರಿ ತಮ್ಮ ನಗೆಮಾತುಗಳಿಂದ ಜನರನ್ನು ರಂಜಿಸಿದರು. ನಿರಾಕಾರಿ ಮಾತನಾಡಿದರು ಜಿ. ಎಸ್‌. ಸೋನಾರ ನಿರೂಪಿಸಿದರು.   

ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಗೌರವ ಕಾರ್ಯದರ್ಶಿ ಆರ್‌. ಬಿ. ಕಟ್ಟಿ, ಅರವಿಂದ ಹುನಗುಂದ, ಎಂ. ಬಿ. ಹೊಸಳ್ಳಿ, ಡಾ. ಕೆ. ಡಿ. ದೇಶಪಾಂಡೆ,  ಮದನ ಕಣಬೂರ, ಎಂ.ಎಫ್ ಸುಬ್ಬಾಪುರಮಠ, ವ್ಯಾಸಾಚಾರ್ಯ ಅಂಬೇಕರ, ಬಸವರಾಜ ಪಟ್ಟಣಶೆಟ್ಟಿ, ತವನಪ್ಪ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.