ಪಟ್ಟಣದಲ್ಲಿ ವಿಶ್ವ ಕ್ಷಯ ರೋಗ ದಿನ ಆಚರಣೆ

ಪಟ್ಟಣದಲ್ಲಿ ವಿಶ್ವ ಕ್ಷಯ ರೋಗ ದಿನ ಆಚರಣೆ  World Tuberculosis Day celebrated in the town

ತಾಳಿಕೋಟಿ 24: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಜಾಗೃತಿ ಜಾತಾ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.  

ಶ್ರೀ ಭಾಗ್ಯವಂತಿ ನರ್ಸಿಂಗ್ ಕಾಲೇಜ್ ಎಸ್ ವಿ ಎಂ ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್ ಹಾಗೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಶ್ರೀ ಬಸವೇಶ್ವರ ವೃತ್ತದ ವರೆಗೆ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು 1982 ರಿಂದ ಪ್ರತಿ ವರ್ಷ ಮಾರ್ಚ್‌ 24ರಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಕ್ಷಯ ರೋಗ ದಿನವನ್ನು ಆಚರಿಸುತ್ತಿದೆ ಈ ವಿನಾಶಕಾರಿ ರೋಗದ ವಿರುದ್ಧದ ಹೋರಾಟದಲ್ಲಿ ಜಾಗೃತಿ ಮೂಡಿಸಿ ಜನರ ಪ್ರಯತ್ನಗಳನ್ನು ಒಗ್ಗೂಡಿಸಲು ಈ ದಿನವನ್ನು ಮೀಸಲಿರಿಸಲಾಗಿದೆ." ಹೌದು ಭಾರತದ ನೇತೃತ್ವದಲ್ಲಿ ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು" ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ. ಗಮನಾರ್ಹ ಪ್ರಗತಿಯ ಹೊರತಾಗಿಯೂ ಕ್ಷಯ ರೋಗವು ಜಾಗತಿಕ ಸವಾಲಾಗಿ ಮಾರ​‍್ಪಟಟಿದೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕ್ಷಯ ರೋಗವು ವಾರ್ಷಿಕವಾಗಿ 1.5 ಮಿಲಿಯನ್ ಗಿಂತಲೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ, ಭಾರತದಲ್ಲಿಯೂ ಇದರ ಪ್ರಭಾವ ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು 2030 ರವರೆಗೆ ದೇಶವನ್ನು ಕ್ಷಯ ಮುಕ್ತವಾಗಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ ಇದಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದರು.  

ಪ್ರಸ್ತಾವಿಕವಾಗಿ ಮಾತನಾಡಿದ ಎಸ್ ಟಿ ಎಸ್ ಶಿವರಾಜಕುಮಾರ ದೀಕ್ಷಿತ ಅವರು ಕ್ಷಯರೋಗದ ಲಕ್ಷಣ ಚಿಕಿತ್ಸೆ ಕುರಿತು ಸವಿಸ್ತಾರವಾಗಿ ತಿಳಿಸಿದರು. ಶ್ರೀ ಭಾಗ್ಯವಂತಿ ನರ್ಸಿಂಗ್ ಕಾಲೇಜ್ ಹಾಗೂ ಎಸ್ ವಿ ಎಂ ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್ ನ ನೂರಾರು ವಿದ್ಯಾರ್ಥಿಗಳು ಕೈಯಲ್ಲಿ ಪೋಸ್ಟರ್ಸ್‌ ಹಾಗೂ ಫ್ಲೆಕ್ಸ್‌ ಗಳನ್ನು ಹಿಡಿದುಕೊಂಡು ಜಾಥಾ ಮೂಲಕ ಸಾರ್ವಜನಿಕರಲ್ಲಿ ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸಿದರು.  

ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಭಾಗ್ಯವಂತಿ ನರ್ಸಿಂಗ್ ಹಾಗೂ ಎಸ್ ವಿ ಎಂ.ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಬಸವರಾಜ ಅಗ್ನಿ ಸ್ವಾಗತಿಸಿದರು. ಐಸಿಟಿಸಿ ಆಪ್ತ ಸಮಾಲೋಚಕಿ ಕಲ್ಪನಾ ಹೂಗಾರ ನಿರೂಪಿಸಿದರು. ಟಿ.ಬಿ.ಎಚ್‌.ವಿ. ಮಲ್ಲನಗೌಡ ಬಿರಾದಾರ ವಂದಿಸಿದರು.