ವಿಶ್ವಕಪ್ ವಿಜೇತ ಕಾಫು ಅವರ ಪುತ್ರ ಹೃದಯಾಘಾತದಿಂದ ಸಾವು

ಅಟ್ಲಾಂಟ. ಸೆ 6:   ಬ್ರೆಜಿಲ್ ಫುಟ್ಬಾಲ್ ತಂಡದ ಮಾಜಿ ನಾಯಕ ಹಾಗೂ ಎರಡು ಬಾರಿ ವಿಶ್ವಕಪ್ ವಿಜೇತ ಕಾಫು ಅವರ ಪುತ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಫು ಅವರ ಹಿರಿಯ ಪುತ್ರ ಡ್ಯಾನಿಲೊ ಫೆಲಿಸಿಯಾನೊ ಡಿ ಮೊರೆಸ್ (30) ಮೃತಪಟ್ಟಿದ್ದು, ಅವರು ಸಾವ್ಪೋಲೊದ ತಮ್ಮ ಮನೆಯೆ ಸಮೀಪ ಸ್ನೇಹಿತರೊಂದಿಗೆ ಫುಟ್ಬಾಲ್ ಆಡುತ್ತಿದ್ದಾಗ ಹೃದಯಾಘಾನ ಉಂಟಾಗಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೃದಯಾಘಾತವಾಗಿ ನೆಲಕ್ಕೆ ಕುಸಿಯುತ್ತಿದ್ದಂತೆ ಆತನನ್ನು ಹತ್ತಿರದ ಆಲ್ಬರ್ಟ್ ಐನ್ಸ್ಟೇನ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ತಡವಾಗಿ ಕೊನೆಯುಸಿರೆಳೆದರು. ಈ ಬಗ್ಗೆ ಯುರೋಪ್ ಫುಟ್ಬಾಲ್ ಅಸೋಸಿಯೇಷನ್ (ಯುಇಎಫ್ಎ) ಹಾಗೂ ಇಟಲಿಯ ಫುಟ್ಬಾಲ್ ಕ್ಲಬ್ ಎಸಿ ಮಿಲನ್ ಟ್ವೀಟ್ನಲ್ಲಿ ಕಾಫು ಅವರ ಪುತ್ರನಿಗೆ ಸಂತಾಪ ಸೂಚಿಸಿವೆ. "ಹೃದಯಾಘಾತದಿಂದ ತಮ್ಮ ಪುತ್ರ ಡ್ಯಾನಿಲೊ ಅವರನ್ನು ಕಳೆದುಕೊಂಡಿರುವ ಕಾಫು ಅವರಿಗೆ ಹಾಗೂ ಆತನ ಕುಟುಂಬಕ್ಕೆ ಯುಇಎಫ್ಎ ತೀವ್ರ ಸಂತಾಪ ಸೂಚಿಸಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಫುಟ್ಬಾಲ್ ಜಗತ್ತು ನಿಮ್ಮ ಜತೆ ಇರಲಿದೆ ಎಂದು ಯುಇಎಫ್ಎ ಟ್ವೀಟ್ ಮಾಡಿದೆ.  ಸ್ಪೇನ್ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಕೂಡ ಕಾಫು ಅವರ ಪುತ್ರನ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ.