ವಿಶ್ವ ರಕ್ತದಾನಿಗಳ ದಿನಾಚರಣೆ: ರಕ್ತದಾನ ಶಿಬಿರ ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ: ಡಾ.ಸರಿತಾ

ವಿಶ್ವ ರಕ್ತದಾನಿಗಳ ದಿನಾಚರಣೆ: ರಕ್ತದಾನ ಶಿಬಿರ  ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ: ಡಾ.ಸರಿತಾ World Blood Donor Day: Blood donation camp Blood donation is the best donation: Dr. Saritha

ಹಾವೇರಿ 19 : ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದಾನದಿಂದ ಒಬ್ಬರ ಜೀವ ಉಳಿಸಬಹುದು. ಹಾಗಾಗಿ ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ರೋಗವಾಹಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ ಅವರು ಹೇಳಿದರು. 

ನಗರದ  ಶ್ರೀ ಭಗತ್‌ಸಿಂಗ್ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಜೆಸಿಐ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 

ಶಸ್ತ್ರ ಚಿಕಿತ್ಸೆ, ಅಪಘಾತ ಸಂಭವಿಸಿದಾಗ ಹಾಗೂ ರಕ್ತಹೀನತೆ ಉಳ್ಳವರಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ರಕ್ತವನ್ನು ಕೃತಞವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ 18 ವರ್ಷ ಪೂರೈಸಿದ ಆರೋಗ್ಯವಂತ ಯುವಕ ಮತ್ತು ಯುವತಿಯರು ರಕ್ತದಾನ ಮಾಡಬಹುದು.  ಪದವಿ ಕಾಲೇಜುಗಳು, ಸಂಘ-ಸಂಸ್ಥೆಗಳು, ಸಮಾಜ ಸೇವಕರು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದ ಕೊರತೆ ನೀಗಿಸಲು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.  

ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ನೀಲೇಶ ಎಮ್‌.ಎನ್ ಅವರು  ರಕ್ತದಾನ ಮಹತ್ವ, ರಕ್ತದಾನ ಶಿಬಿರಗಳ ಆಯೋಜನೆ ಹಾಗೂ ರಕ್ತದಾನ ರಕ್ತದಾನಿಗಳ ದಿನಾಚರಣೆ ಕುರಿತು ಮಾಹಿತಿ ನೀಡಿದರು ಹಾಗೂ ಜಿಲ್ಲೆಯಲ್ಲಿ ರಕ್ತದ ಕೊರತೆಯಾಗದಂತೆ ಎಲ್ಲರೂ ಸಮನ್ವಯದಿಂದ ಕೆಲಸಮಾಡೋಣ ಎಂದು ಹೇಳಿದರು. 

ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಮಾತನಾಡಿ, ವಿದ್ಯಾರ್ಥಿಗಳು ಜೆಂಕ್ ಫುಡ್ ಸೇವಿಸಬಾರದು, ನಮ್ಮ ಸಾಂಪ್ರದಾಯಿಕ, ಪ್ರೋಟಿನ್‌ಯುಕ್ತ ಮತ್ತು ವಿಟಮಿನ್ ಆಹಾರ ಸೇವಿಸಬೇಕು  ಎಂದು ಸಲಹೆ ನೀಡಿದರು.  

ಸನ್ಮಾನ:   ಎಂಟು ಬಾರಿರಕ್ತದಾನ ಮಾಡಿದ ಹಾವೇರಿಯ ರಕ್ಷಿತಾ ಡಿ.,  15 ಬಾರಿ ರಕ್ತದಾನ ಮಾಡಿದ ರಾಣೇಬೆನ್ನೂರಿನ ಪ್ರಜ್ವಲ್ ಜಾಧವ ಹಾಗೂ 30 ಬಾರಿ ರಕ್ತದಾನ ಮಾಡಿದ ಆಡೂರಿನ ಸದಾನಂದ ಬಿ.ಆರೇರ ಅವರನ್ನು ಸನ್ಮಾನಿಸಲಾಯಿತು.  

ಭಗತ್ ಸಮೂಹ ಸಂಸ್ಥೆಗಳ ಅಧ್ಯಕ್ಷ ದತ್ತಾತ್ರೇಯ ಜೋಶಿ ಅಧ್ಯಕ್ಷತೆ ವಹಿಸಿದ್ದರು.  ಡಾ. ಚನ್ನಬಸಯ್ಯ ವಿರಕ್ತಮಠ, ಜಿಲ್ಲಾ ಐಇಸಿ ಅಧಿಕಾರಿ ಚನ್ನಪ್ಪ ಲಮಾಣಿ, ಪ್ರಾಂಶುಪಾಲ ರತನ್ ಕಾಶಪ್ಪನವರ, ಮಂಜುನಾಥ ಹಟ್ಟಿ ಇತರರು ಉಪಸ್ಥಿತರಿದ್ದರು.ಉಪನ್ಯಾಸಕಿ ದೀಪಾ ಜೋಗಳ್ಳಿ ಸ್ವಾಗತಿಸಿದರು. ಜಿಲ್ಲಾ ಏಡ್ಸ್‌ ನಿಯಂತ್ರಣ ಕೇಂದ್ರದ ಲೆಕ್ಕ ಸಹಾಯಕ ವಿರಾಜ ಸುಣಗಾರ ಕಾರ್ಯಕ್ರಮ ನಿರೂಪಿಸಿದರು.  

ಜಾಥಾ: ರಕ್ತದಾನದ ಕುರಿತು ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಅವರು ಚಾಲನೆ  ನೀಡಿ ಮಾತನಾಡಿದ ಅವರು, ಯುವ ಜನಾಂಗ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು. 

ಶ್ರೀ ಭಗತ್‌ಸಿಂಗ್ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದಿಂದ  ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಜರುಗಿತು.