ವಿಶ್ವ ಮಾದಕ ವ್ಯಸನ ವಿರೋಧಿ ದಿನ: ಸಾಂಗ್ಲಿಯಲ್ಲಿ ಬೃಹತ್ ಜಾಗೃತಿ ರ್ಯಾಲಿ

ವಿಶ್ವ ಮಾದಕ ವ್ಯಸನ ವಿರೋಧಿ ದಿನ: ಸಾಂಗ್ಲಿಯಲ್ಲಿ ಬೃಹತ್ ಜಾಗೃತಿ ರ್ಯಾಲಿ World Anti-Drug Day: Massive awareness rally in Sangli

ಲೋಕದರ್ಶನ ವರದಿ 

 ಕಾಗವಾಡ 30 : ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನವು ಅವರ ಭವಿಷ್ಯಕ್ಕೆ ಮಾರಕವಾಗುತ್ತಿರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಮಾದಕ ವ್ಯಸನ ವಿರೋಧಿ ದಿನದ ಅಂಗವಾಗಿ ಸಾಂಗ್ಲಿಯಲ್ಲಿ ಮಿರಜ್ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಬೃಹತ್ ಜಾಗೃತಿ ರ್ಯಾಲಿ ಆಯೋಜಿಸಲಾಯಿತು.  

ಮಿರಜ್ ನಿರ್ಮಲ ಆಸ್ಪತ್ರೆಯಿಂದ ಆರಂಭವಾದ ರ್ಯಾಲಿಯು ಮಿರಜ್ ಹಾಗೂ ಸಾಂಗ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ವ್ಯಸನಮುಕ್ತ ಯುವಜನತೆಯೇ ಬಲಿಷ್ಠ ಭಾರತದ ನಿರ್ಮಾತೃಗಳು ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದವರು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಇದೇ ವೇಳೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಲಾಯಿತು.  

ಈ ರೀತಿಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಾನಸಿಕ ಆರೋಗ್ಯದ ಮಹತ್ವ, ವ್ಯಸನಮುಕ್ತಿ ಹಾಗೂ ಪುನರ್ವಸತಿ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ನಿರ್ಮಲ ಆಸ್ಪತ್ರೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.  

ರ್ಯಾಲಿಯಲ್ಲಿ ನಿರ್ಮಲ ಆಸ್ಪತ್ರೆಯ ಸಿಇಒ ವಿನಾಯಕ ಕವಡೆ, ಕಡೆಯೋಳಿ ಗ್ರಾಮದ ಯಶವಂತ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿಗಳು, ನಿರ್ಮಲ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.