ಚಿಕ್ಕೋಡಿಯಲ್ಲಿ ವಿಶ್ವದ ಅದ್ವಿತೀಯ 151 ಅಡಿ ಪಾರ್ಶ್ವನಾಥ ಮಹಾಮೂರ್ತಿ ಪ್ರತಿಷ್ಠಾಪನೆ; ಮೂರು ದಿನಗಳ ಭವ್ಯ ಮಹೋತ್ಸವ

ಚಿಕ್ಕೋಡಿಯಲ್ಲಿ ವಿಶ್ವದ ಅದ್ವಿತೀಯ 151 ಅಡಿ ಪಾರ್ಶ್ವನಾಥ ಮಹಾಮೂರ್ತಿ ಪ್ರತಿಷ್ಠಾಪನೆ;  ಮೂರು ದಿನಗಳ ಭವ್ಯ ಮಹೋತ್ಸವ World's unique 151-foot Parshvanatha statue installed in Chikkodi; Three-day grand festival

ಚಿಕ್ಕೋಡಿ 22 :  ವಿಶ್ವದಲ್ಲೇ ಮೊದಲ ಬಾರಿಗೆ ನಿರ್ಮಾಣಗೊಳ್ಳುತ್ತಿರುವ ಅದ್ವಿತೀಯ 151 ಅಡಿ ಎತ್ತರದ ಭಗವಾನ್ ಪಾರ್ಶ್ವನಾಥರ ಮಹಾಮೂರ್ತಿಯ ಪ್ರತಿಷ್ಠಾಪನೆಗೆ ಸಂಬಂಧಿಸಿದ ಭೂಮಿ ಶುದ್ಧೀಕರಣ, ಸರಸ್ವತಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಎ.ಜಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮವು ಚಿಕ್ಕೋಡಿ ತಾಲೂಕಿನ ನೇಜ ಕ್ರಾಸ್ ಬಳಿ ದಿ. 24, 25 ಮತ್ತು 26 ರಂದು ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ ಎಂದು ಪ.ಪೂ. ರಾಷ್ಟ್ರ ಸಂತ ಆಚಾರ್ಯ 108 ಗುಣಧರನಂದಿ ಮುನಿಮಹಾರಾಜರು ತಿಳಿಸಿದರು.

ಶುಕ್ರವಾರ ನೇಜ ಕ್ರಾಸ್ ಸಮೀಪ ನಿರ್ಮಾಣಗೊಂಡಿರುವ ನೂತನ ಎ.ಜಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲೇ ಮೊದಲ ಬಾರಿಗೆ 151 ಅಡಿ ಎತ್ತರದ ಭಗವಾನ್ ಪಾರ್ಶ್ವನಾಥರ ಭವ್ಯ ಪಾಷಾಣ ವಿಗ್ರಹವನ್ನು ಗುಣಧರ ತೀರ್ಥ ಶಮನೇವಾಡಿ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ. ಇದರ ಅಂಗವಾಗಿ ಭೂಮಿ ಶುದ್ಧೀಕರಣ, ಸರಸ್ವತಿ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಇದರ ಜೊತೆಗೆ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಶುಲ್ಕದಲ್ಲೇ ಗುಣಮಟ್ಟದ ತಾಂತ್ರಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಎ.ಜಿ.ಎಂ. ಇಂಜಿನಿಯರಿಂಗ್ ಕಾಲೇಜನ್ನು ಉದ್ಘಾಟಿಸಲಾಗುತ್ತಿದೆ. ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶವಾಗಲಿದೆ ಎಂದರು.ದಿ. 24 ರಂದು ಮುಂಜಾನೆ ಅಭಿಷೇಕ ಮತ್ತು ನಿತ್ಯ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ ವಾಸ್ತು ವಿಧಾನ ನೆರವೇರಲಿದ್ದು, ಸಂಜೆ ಆರತಿ ನಡೆಯಲಿದೆ. ರಾತ್ರಿ ಗಾಯಕ ಚಂದನ ಶೆಟ್ಟಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 

ಈ ದಿನ ಪ್ರಮುಖ ಅತಿಥಿಗಳಾಗಿ ಪ್ರಕಾಶ ಹುಕ್ಕೇರಿ, ಅಣ್ಣಾಸಾಹೇಬ ಜೊಲ್ಲೆ, ಗಣೇಶ ಹುಕ್ಕೇರಿ, ಶಶಿಕಲಾ ಜೊಲ್ಲೆ ಹಾಗೂ ವೀರಕುಮಾರ ಪಾಟೀಲ ಭಾಗವಹಿಸಲಿದ್ದಾರೆ. ದಿ. 25 ರಂದು ಮುಂಜಾನೆ ಅಭಿಷೇಕ, ನಿತ್ಯ ಪೂಜೆ, ಪಾರ್ಶ್ವನಾಥ ವಿಧಾನ ಹಾಗೂ ಸರಸ್ವತಿ ಮೂರ್ತಿಯ ಶುದ್ಧೀಕರಣ ವಿಧಿವಿಧಾನಗಳು ನಡೆಯಲಿವೆ. ಸಂಜೆ 7 ಗಂಟೆಗೆ ಪಿಯುಸಿ ಪ್ರಾಚಾರ್ಯರ ಸತ್ಕಾರ ಸಮಾರಂಭ ಜರುಗಲಿದೆ.

ರಾತ್ರಿ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಲಕ್ಷ್ಮಣ ಸವದಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.ದಿ. 26 ರಂದು ಮುಂಜಾನೆ ಅಭಿಷೇಕ ಮತ್ತು ನಿತ್ಯ ಪೂಜೆಯ ನಂತರ ಬೆಳಿಗ್ಗೆ 9 ಗಂಟೆಗೆ ಎ.ಜಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಉದ್ಘಾಟನೆ ಹಾಗೂ ಸರಸ್ವತಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟಕರಾಗಿ ರಾಜ್ಯಪಾಲ ಥಾವರಚಂದ ಗೇಹ್ಲೋಟ್ ಹಾಗೂ ಬಿಜೆಪಿ ರಾಷ್ಟ್ರೀಯ ಮಹಾಸಚಿವ ಬಿ.ಎಲ್‌. ಸಂತೋಷ ಆಗಮಿಸಲಿದ್ದಾರೆ.ಈ ಮಹೋತ್ಸವವು ಧಾರ್ಮಿಕ ಭಕ್ತಿ, ಶೈಕ್ಷಣಿಕ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಚಿಕ್ಕೋಡಿ ಭಾಗದ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಜಯಕುಮಾರ ಖೋತ, ಬಾಬಣ್ಣಾ ಖೋತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.