ಮಹಿಳೆಯರು ಒಳ್ಳೆಯವರಾಗಿರುವುದಕ್ಕಿಂತ ಹೆಚ್ಚು ಧೈರ್ಯವಂತರಾಗಿರಬೇಕು: ಡಾ.ನಾಗಲಕ್ಷ್ಮೀ ಚೌಧರಿ
Women should be more courageous than nice: Dr. Nagalakshmi Choudhary
ಕೊಪ್ಪಳ 06: ಮಹಿಳೆಯರು ಒಳ್ಳೆಯವರಾಗಿರುವುದು ತಪ್ಪಲ್ಲ, ಆದರೆ ಅದಕ್ಕೂ ಹೆಚ್ಚು ಧೈರ್ಯವಂತರಾಗಿರಬೇಕು. ತಮಗಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ಇರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು. ಶುಕ್ರವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಮತ್ತು ಆಂತರಿಕ ದೂರು ನಿವಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2013 ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗಸ್ಥ ಅಥವಾ ಕೌಟುಂಬಿಕ ವಲಯಗಳಲ್ಲಿರುವ ಬಹುತೇಕ ಮಹಿಳೆಯರು ತಮ್ಮ ಮೇಲೆ ಉಂಟಾಗುವ ದೈಹಿಕ ಹಲ್ಲೆ, ಲೈಂಗಿಕ ದೌರ್ಜನ್ಯದಂತ ಘಟನೆಗಳಲ್ಲಿ ಮೌನದಿಂದ ಇದ್ದರೆ ಪರಿಸ್ಥಿತಿ ಸುಧಾರಿಸಬಹುದು ಎಂಬ ಭಾವನೆ ಇರುತ್ತದೆ. ಅಥವಾ ತಮ್ಮ ಮೇಲಿನ ದೌರ್ಜನ್ಯದ ಕುರಿತು ಯಾರಿಗಾದರೂ ಹೇಳಿದಲ್ಲಿ ಸಮಾಜ ತಮ್ಮನ್ನು ಕೀಳಾಗಿ ನೋಡಬಹುದು ಎಂಬ ಕೀಳರಿಮೆಯೂ ಇರುತ್ತದೆ. ಕೆಲವೊಮ್ಮೆ ಮಾನ, ಪ್ರಾಣದ ಭಯದಿಂದಲೂ ದೌರ್ಜನ್ಯದ ಕುರಿತು ಮಹಿಳೆ ಎಲ್ಲಿಯೂ ಧ್ವನಿ ಎತ್ತುವುದಿಲ್ಲ. ಇದರಿಂದ ಮಹಿಳೆಯ ಸಮಸ್ಯೆಗೆ ಪರಿಹಾರ ದೊರೆಯುವ ಬದಲು ಇನ್ನಷ್ಟು ನೋವು, ದೌರ್ಜನ್ಯ ಹೆಚ್ಚಾಗುತ್ತಾ ಹೋಗುತ್ತದೆ. ಮಹಿಳೆಯರು ಮೂಲತಃ ಭಾವನಾತ್ಮಕ ಜೀವಿಗಳು. ಇದನ್ನೇ ಬಂಡವಾಳವಾಗಿಸಿಕೊಂಡು ಕೆಲವು ವಿಕೃತ ಮನಸ್ಸಿನವರು ಮಹಿಳೆಯ ಮೇಲೆ ದೌರ್ಜನ್ಯವೆಸುಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಒಳ್ಳೆಯತನ, ಭಾವನೆಗಳು, ಇತರೆ ಹಿಂಜರಿಕೆಗಳನ್ನು ಬಿಟ್ಟು ಧೈರ್ಯದಿಂದ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ನಮ್ಮ ಒಳ್ಳೆಯತನ ದೌರ್ಬಲ್ಯವಾಗಬಾರದು ಎಂದು ಅವರು ಹೇಳಿದರು.
ಮಹಿಳೆಯರು ಆತ್ಮವಿಶ್ವಾಸದಿಂದ ಹಾಗೂ ಭಯವಿಲ್ಲದೆ ಕೆಲಸ ಮಾಡಲು ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ಪ್ರತಿಯೊಂದು ಸಂಸ್ಥೆಯ ಕರ್ತವ್ಯವಾಗಿದೆ. ಈ ಹಿನ್ನೆಲೆ ಪೋಶ್ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅಗತ್ಯ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಂತಹ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸ್ಥಳೀಯ ಮತ್ತು ಆಂತರಿಕ ದೂರು ನಿವಾರಣಾ ಸಮಿತಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಿತಿಯ ಸದಸ್ಯರು ಕಾಯ್ದೆಯ ನಿಯಮಗಳು, ತನಿಖಾ ವಿಧಾನಗಳು ಹಾಗೂ ಮಹಿಳೆಯರಿಗೆ ನ್ಯಾಯ ಒದಗಿಸುವ ಕ್ರಮಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು.
ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯದ ಕುರಿತು ಮುಕ್ತವಾಗಿ ದೂರು ಸಲ್ಲಿಸಲು ಧೈರ್ಯ ಹೊಂದಬೇಕು. ಯಾವುದೇ ಸಂಸ್ಥೆಯಲ್ಲಿ ಪೋಶ್ ಕಾಯ್ದೆಯನ್ವಯ ಸಮಿತಿಯನ್ನು ಕಡ್ಡಾಯವಾಗಿ ರಚಿಸಿ, ಅದರ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಹಿಳೆಯರು ಕೆಲಸ ಮಾಡುವ ಸ್ಥಳ ಸುರಕ್ಷಿತವಾಗಿದ್ದು, ಸಂತೋಷದ ವಾತಾವರಣ ಹೊಂದಿದ್ದರೆ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ಮಹಿಳೆಯರು ಮಾನಸಿಕ, ದೈಹಿಕ ಒತ್ತಡ ಅಥವಾ ದೌರ್ಜನ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಸಂಸ್ಥೆಗಳ ಜವಾಬ್ದಾರಿ ಎಂದು ಹೇಳಿದರು. 2013ರ “ಪ್ರಿವೆನ್ಷನ್ ಆಫ್ ಸೆಕ್ಸುವಲ್ ಹೆರಾಸ್ಮೆಂಟ್ (ಪೋಶ್) ಕಾಯ್ದೆ” ಮಹಿಳೆಯರ ರಕ್ಷಣೆಗೆ ಮಹತ್ವದ ಕಾನೂನು ಆಗಿದೆ. ಈ ಕಾರ್ಯಾಗಾರದಿಂದ ಎಲ್ಲರೂ ಜಾಗೃತರಾಗಿ ಇಲ್ಲಿ ಪಡೆದ ಮಾಹಿತಿಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅವರು ಹೇಳಿದರು.
ಸರ್ಕಾರಿ ಅಥವಾ ಖಾಸಗಿ ಯಾವುದೇ ಕಚೇರಿ, ಸಂಸ್ಥೆಗಳಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ನೆಮ್ಮದಿಯ ವಾತಾವರಣ ಇರಬೇಕು. ಮಹಿಳೆ ಸ್ವತಂತ್ರವಾಗಿ ಕೆಲಸ ಮಾಡಲು ಅವಳಲ್ಲಿ ಸುರಕ್ಷತೆಯ ಭಾವ ಮೂಡಬೇಕು. ಆಗ ಮಾತ್ರ ಅವಳಲ್ಲಿ ಉತ್ತಮ ಕಾರ್ಯಕ್ಷಮತೆ ಮೂಡಲು ಸಾಧ್ಯ ಮತ್ತು ಕೆಲಸದಲ್ಲಿ ಹೆಚ್ಚು ತಲ್ಲೀನತೆ ಹೊಂದಿ ಗುಣಮಟ್ಟದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಹಾನಿ, ಮಾನಸಿಕ ಹಿಂಸೆಯಂತಹ ದೌರ್ಜನ್ಯಗಳಿಗೆ ಪ್ರಸ್ತುತ ಕಾನೂನಿನಲ್ಲಿ ಹಲವಾರು ಪರಿಹಾರ ಕ್ರಮಗಳಿವೆ. ದೌರ್ಜನ್ಯವೆಸಗಿದವರ ಮೇಲೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ, ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಪರಾಧಿಗಳಿಗೆ ಸೂಕ್ತ ಶಿಕ್ಷೆಯನ್ನು ಸಹ ನ್ಯಾಯಾಲಯ ನೀಡುತ್ತದೆ ಎಂದು ಅವರು ತಿಳಿಸಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2013 ಅನ್ವಯ ಪ್ರತಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಅನ್ಯಾಯ ಉಂಟಾದಾಗ ಆಂತರಿಕ ದೂರು ನಿವಾರಣ ಸಮಿತಿಗೆ ದೂರು ಸಲ್ಲಿಸಿ, ನ್ಯಾಯ ಪಡೆಯಬಹುದು. ಸಮಿತಿಯು ತನ್ನ ಕಾರ್ಯವ್ಯಾಪ್ತಿಯಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಯಾವುದೇ ಕಚೇರಿಗಳಲ್ಲಿ ಮಹಿಳೆಯರಿಗೆ ಉತ್ತಮ ಕೆಲಸದ ವಾತಾವರಣ ನಿರ್ಮಿಸಿಕೊಡುವುದು ಮೇಲಧಿಕಾರಿಗಳ ಕರ್ತವ್ಯ. ಸಹೋದ್ಯೋಗಿಗಳೂ ಕೂಡ ಸುರಕ್ಷತಾ ಭಾವನೆ ಮೂಡಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಡಿಎಫ್‌ಒ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಆಯೋಗದ ಸದಸ್ಯ ಕಾರ್ಯದರ್ಶಿ ರೂಪಾ, ಸಂಪನ್ಮೂಲ ವ್ಯಕ್ತಿ ಚಂದ್ರಿಕಾ ಟಿ.ಎಸ್. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 