ಮಹಿಳಾ ವಿವಿದ ವಾರ್ಷಿಕ ದಿನಾಚರಣೆ ಕಾರ್ಯಕ್ರಮ
Women's University Annual Day Celebration Program
ವಿಜಯಪುರ, 16 ; ನಾವು ಮಾಡುವ ಕೆಲಸಗಳು ಕಾಲಾನಂತರದಲ್ಲಿ ಮರೆಯಾಗಬಹುದಾದರೂ, ನಾವು ಕಟ್ಟಿದ ಶಿಕ್ಷಣ ಸಂಸ್ಥೆಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿ ಮತ್ತು ಮಹಿಳಾ ವಿವಿಯ ಸಂಸ್ಥಾಪಕ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ವಾರ್ಷಿಕ ದಿನಾಚರಣೆ-2025’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳಾ ವಿಶ್ವವಿದ್ಯಾನಿಲಯ ಕೇವಲ 10 ವಾರಗಳ ಅಂತರದಲ್ಲಿ ಸ್ಥಾಪಿತವಾಯಿತು ಎಂಬುದು ಇತಿಹಾಸದಲ್ಲೇ ವಿಶಿಷ್ಟ ಸಾಧನೆ. ವಿಶ್ವವಿದ್ಯಾನಿಲಯ ಸ್ಥಾಪನೆಯ ಆದೇಶ ನನಗೆ ದೊರೆತಾಗ, ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಮಹತ್ವಪೂರ್ಣ ಗುರಿಯನ್ನು ಸಾಧಿಸಬೇಕು ಎಂಬ ದೃಢ ನಿಶ್ಚಯದೊಂದಿಗೆ ಕಾರ್ಯಪ್ರವೃತ್ತನಾದೆ. ಯಾವ ದೇಶದಲ್ಲಿ ಮಹಿಳೆಗೆ ಶಿಕ್ಷಣ ಸಿಗುವುದಿಲ್ಲವೋ, ಆ ದೇಶದಲ್ಲಿ ಸುಧಾರಣೆ ಸಾಧ್ಯವಿಲ್ಲ. ಮಹಿಳೆಯರಿಗಾಗಿ, ಅವರ ಬೆಳವಣಿಗೆಗಾಗಿ ಸ್ಥಾಪಿತ ಈ ವಿಶ್ವವಿದ್ಯಾನಿಲಯ ಮುಂದಿನ ದಿನಗಳಲ್ಲಿ ಸಾವಿರಾರು ಮಹಿಳೆಯರ ಬದುಕನ್ನು ರೂಪಿಸಲಿ, ಶಿಕ್ಷಣದ ಬೆಳಕನ್ನು ಹರಡಲಿ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಮಾತನಾಡಿ, ಅಕ್ಕಮಹಾದೇವಿ ಹೆಸರಿನ ಈ ಮಹಾವಿದ್ಯಾಲಯ ಎಲ್ಲಾ ಮಹಿಳೆಯರಿಗೂ ಪೌರುಷ ಮತ್ತು ಸ್ಫೂರ್ತಿಯ ಸಂಕೇತವಾಗಿದೆ. ಮಹಿಳೆಯರ ಕಾರ್ಯಕ್ಷಮತೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಬೆಳಗುತ್ತಿದೆ. ಮಹಿಳೆಯರು ಕೇವಲ ಮನೆಯ ಒಳಗಷ್ಟೆ ಅಲ್ಲ, ಇಡೀ ಸಮಾಜದ ಮುಂದಾಳುತ್ವದ ಹುದ್ದೆಗೂ ತಲುಪಬೇಕು. ಮಹಿಳೆಯರ ವ್ಯಕ್ತಿತ್ವವನ್ನು ಗೌರವದಿಂದ ನೋಡುವಂತಹ ಸಮಾಜವೊಂದು ರೂಪುಗೊಳ್ಳಬೇಕು ಈ ಆಶಯವನ್ನೇ ಈ ಸಂಸ್ಥೆ ಬೆಳಗಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ ಕೋರಿಶೆಟ್ಟಿ ಮಾತನಾಡಿ, ಶಿಕ್ಷಣ, ಸಮುದಾಯ ಮತ್ತು ಮಹಿಳಾ ಸಬಲಿಕರಣ ಎಂಬ ತ್ರಿವರ್ಣ ಧ್ಯೇಯದೊಂದಿಗೆ ಪ್ರಾರಂಭವಾದ ಈ ವಿಶ್ವವಿದ್ಯಾಲಯ, ಇಂದು ಸಾವಿರಾರು ವಿದ್ಯಾರ್ಥಿನಿಯರ ಜೀವನವನ್ನು ಬೆಳಗಿಸುತ್ತಿದೆ. ನಿರಂತರ ಕಲಿಕೆಯ ಮೂಲಕ ಇವರು ಸಾಧನೆಯ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಇಂತಹ ವಿಶಿಷ್ಟ ವೇದಿಕೆಯಲ್ಲಿ ಕುಲಪತಿಯಾಗಿ ಮಾತನಾಡುತ್ತಿರುವುದು ನನಗೆ ಗೌರವದ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಎಫ್. ಯಲಿಗಾರ, ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್ ಚಂದ್ರಶೇಖರ, ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ.ರಿಹಾನಾ ಜಬೀನ್ ಹಾಗೂ ಮಲ್ಲಮ್ಮಾ ಯಾಳವಾರ, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆ ಕೇಂದ್ರ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಮಹಿಳಾ ವಿವಿಯ ಕಲಸಚಿವ ಶಂಕರಗೌಡ ಸೋಮನಾಳ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ ನಿರ್ದೇಶಕಿ ಪ್ರೊ. ಲಕ್ಷ್ಮೀದೇವಿ ವೈ ವಾರ್ಷಿಕ ವರದಿ ಮಂಡಿಸಿದರು. ಕ್ರೀಡಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ. ವಿಶ್ವನಾಥ ನಡಕಟ್ಟಿ ಕ್ರೀಡಾ ವರದಿ ವಾಚನ ಮಾಡಿದರು. ಡಾ. ಅಕ್ಷಯ ಯಾರ್ದಿ, ಡಾ.ಕಲಾವತಿ ಕಾಂಬಳೆ ಹಾಗೂ ಡಾ ತಹಮೀನಾ ಕೋಲಾರ ಅತಿಥಿಯರನ್ನು ಪರಿಚಯಿಸಿದರು. ಡಾ. ಸುರೇಖಾ ಜಿ ರಾಠೋಡ ಸಾಂಸ್ಕೃತಿಕ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರವನ್ನು ನಡೆಸಿಕೊಟ್ಟರು. ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರ ನಿರೂಪಿಸಿದರು. ವಸತಿ ನಿಲಯದ ಮುಖ್ಯ ನಿಲಯಪಾಲಕಿ ಪ್ರೊ.ಜ್ಯೋತಿ ಉಪಾಧ್ಯೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 