ಬೆಂಗಳೂರು, ಏ.16,ಕೊರೊನಾ ಸೋಂಕು ನಿಯಂತ್ರಿಸಲು ಜಾರಿಯಾದ ಲಾಕ್ಡೌನ್ ಮಧ್ಯೆಯೂ ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು ಕೇಳಿಸಿದೆ. ಜೋಡಿ ಹತ್ಯೆಗೈದಿದ್ದ ಆರೋಪಿ ಮೇಲೆ ಪೊಲೀಸರು ಇಸ್ರೋ ಲೇಔಟ್ ನ ದೇವರ ಕೆರೆ ಬಳಿ ರಾತ್ರಿ ಗುಂಡು ಹಾರಿಸಿ, ಬಂಧಿಸಿದ್ದಾರೆ.ಆರೋಪಿ ಸಂಜಯ್ ಅಲಿಯಾಸ್ ಚಿಕ್ಕಪ್ಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಈ ಸಂಜಯ್ ಪ್ರಮುಖ ಆರೋಪಿಯಾಗಿದ್ದನು.ಆರೋಪಿ ಸಂಜಯ್ ಇದ್ದ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯಪುರ ಠಾಣೆ ಸಬ್ ಇನ್ಸ್ ಪೆಕ್ಟರ್ ಮಧು ಹಾಗೂ ಕೋಣನಕುಂಟೆ ಇನ್ಸ್ ಪೆಕ್ಟರ್ ಧರ್ಮೆಂದ್ರ ಆತನನ್ನು ಬಂಧಿಸಲು ತೆರಳಿದ್ದರು.ಈ ವೇಳೆ ಸುಬ್ರಮಣ್ಯಪುರ ಠಾಣೆ ಸಬ್ ಇನ್ಸ್ಪೆಕ್ಟರ್ಗೆ ಚಾಕುವಿನಿಂದ ಇರಿಯಲು ಆರೋಪಿ ಯತ್ನಿಸಿದ್ದಾನೆ. ತಕ್ಷಣವೇ ಆರೋಪಿಗೆ ಪೊಲೀಸರು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಆತ ಮತ್ತೆ ಹಲ್ಲೆಗೆ ಮುಂದಾದಾಗ ಕೋಣನಕುಂಟೆ ಇನ್ಸ್ಪೆಕ್ಟರ್ ಧರ್ಮೇಂದ್ರ, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.ಸದ್ಯ ಆರೋಪಿ ಸಂಜಯ್ನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.ಕೆಲ ದಿನಗಳ ಹಿಂದೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಮುಕುಂದ ಅಲಿಯಾಸ್ ಕರಿ ಹಂದಿ ಹಾಗೂ ಮನೋಜ್ ಕೊಲೆ ನಡೆದಿತ್ತು. ಸಂಧಾನಕ್ಕೆಂದು ಸೇರಿದ್ದಾಗ ಮುಕುಂದ ಹಾಗೂ ಮನೋಜ್ ನನ್ನು ಸಂಜಯ್ ಟೀಮ್ ಕೊಲೆ ಮಾಡಿ ಪರಾರಿಯಾಗಿತ್ತು. ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದ್ದರು.