ಉತ್ತಮ ಜೀವನದಕ್ರಮದಿಂದ ವೃದ್ಧಾಪ್ಯದಲ್ಲೂ ಆರೋಗ್ಯಕರವಾಗಿ ಬಾಳಲು ಸಾಧ್ಯ : ಡಾ. ಅಂಬಲಿ

ಉತ್ತಮ ಜೀವನದಕ್ರಮದಿಂದ ವೃದ್ಧಾಪ್ಯದಲ್ಲೂ ಆರೋಗ್ಯಕರವಾಗಿ ಬಾಳಲು ಸಾಧ್ಯ : ಡಾ. ಅಂಬಲಿ With a good lifestyle, one can live healthy even in old age: Dr. Ambali

ಲೋಕದರ್ಶನ ವರದಿ 

ವಿಜಯಪುರ 14:  ವೃದ್ದಾಪ್ಯ ಪ್ರತಿಯೊಬ್ಬರ ಬದುಕಿನ ಅನಿವಾರ್ಯ ಅವಧಿ ಹಾಗೂ ಆ ದಿನಗಳಲ್ಲಿ ತಲೆಯಿಂದ ಕಾಲಿನವರೆಗೆ ಹಲವು ಕಾಯಿಲೆಗಳು ಬರುವುದು ಸಹಜ. ಆ ಕಾಯಿಲೆಗಳು ಬರದಂತೆ, ಬಂದರೂ ಅವನ್ನು ಎದುರಿಸಿ ಆರೋಗ್ಯಕರವಾಗಿ ಬದುಕಲು ಉತ್ತಮ ಜೀವನ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಡಾ. ಆನಂದ ಪಿ. ಅಂಬಲಿ, ಎಮ್‌.ಡಿ. ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಹಿರಿಯ ನಾಗರಿಕ ಆರೋಗ್ಯ ವಿಭಾಗ, ಬಿ.ಎಲ್‌.ಡಿ. ಇ ವಿಶ್ವವಿದ್ಯಾಲಯ ವಿಜಯಪುರ ಇವರು ಕರೆಯಿತ್ತರು. 

ಅವರು ರೋಟರಿ ಪ್ರೊಬಸ್ ಕ್ಲಬ್ ವಿಜಯಪುರ ಉತ್ತರ ವತಿಯಿಂದ ನಗರದ ವೀರಶೈವ ಲಿಂಗಾಯತ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿರಿಯ ನಾಗರಿಕರಲ್ಲಿ ಪಾರ್ಕಿನ್ಸನ್ ಮುಖ್ಯ ಕಾಯಿಲೆಯಾಗಿ ಕಾಡುತ್ತದೆ. ಇದು ಮೆದುಳಿನ ನರಕೋಶಗಳು ಡೋಪಮೈನ್ ಎಂಬ ರಾಸಾಯನಿಕವನ್ನು ಉತ್ಪಾದಿಸುವ ಸಾಮರ್ಥ್ಯ ಕಳೆದುಕೊಳ್ಳುವುದರಿಂದ ಬರುತ್ತದೆ. ಆಗ ನಡುಕ, ನಿಧಾನ ಚಲನೆ, ಸ್ನಾಯು ಬಿಗಿತ, ಸಮತೋಲನ-ಸಮಸ್ಯೆ, ಮಲಬದ್ಧತೆ, ನಿದ್ರಾ ಹೀನತೆ, ಖಿನ್ನತೆ, ವಾಸನೆ ಗ್ರಹಿಕೆ ಕಡಿಮೆಯಾಗುವುದು ಮುಂತಾದ ಲಕ್ಷಣ ಕಾಣುತ್ತವೆ ಇದಕ್ಕೆ ಶಾಶ್ವತ ಪರಿಹಾರವಿಲ್ಲ. ಆದರೂ ಆರೋಗ್ಯಕರ ಜೀವನ ಕ್ರಮದಿಂದ ಸಮಯೋಚಿತ ಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಿಸಬಹುದು ಎಂದರು. 

ಹಿರಿಯ ನಾಗರಿಕರಲ್ಲಿ ಪಾರ್ಕಿನ್ಸನ್ ಅಲ್ಲದೆ, ಮರುಳತನ, ಬುದ್ಧಿ ಮಾದ್ಯಂತೆ, ಸ್ನಾಯು ಶಿಥಿಲವಾಗುವುದು ಮುಂತಾದ ಹಲವು ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಇವುಗಳನ್ನು ತಡೆಯಲು, ಬಂದರೂ ಸಹಿಸಿಕೊಂಡು ಬದುಕಲು ಆರೋಗ್ಯಕರವಾದ ಪ್ರೋಟಿನಯುಕ್ತ ನೈಸರ್ಗಿಕ ಆಹಾರ ಸೇವನೆ ವಾಯು ವಿಹಾರ, ಯೋಗ ಹಾಗೂ ಸ್ನಾಯುಗಳ ಬಲವರ್ಧನೆಗೆ ವ್ಯಾಯಾಮಗಳು, ಮಿತ್ರರೊಂದಿಗೆ ಬಂಧುಗಳೊಂದಿಗೆ ಬೆರೆಯುವುದು, ಸರಿಯಾಗಿ ನಿದ್ರೆ, ದಿನಕ್ಕೆ ಕನಿಷ್ಟ 2 ಲೀಟರ್ ಶುದ್ಧ ನೀರು ಸೇವಿಸುವದು ಮುಂತಾದ ಕ್ರಮಗಳಿಂದ ಸಾಧ್ಯ. ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ನಿಮ್ಮ ಸೇವೆ ಮಾಡುವ ಬಂಧುಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿರಿ. 

ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಾಗಿ ಒಂದು ವಿಶೇಷ ವಿಭಾಗವನ್ನೇ ಆರಂಭಿಸಲಾಗಿದೆ. (ರೂಮ್ ನಂ.8) ಅಲ್ಲಿ ಅನೇಕ ತಜ್ಞರಿದ್ದು ಹಿರಿಯ ನಾಗರಿಕರ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಒಂದೇ ಕಡೆ ಸಮಗ್ರ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ಮೊದಲು ಮಕ್ಕಳಿಗೆ ಮಾತ್ರವಿದ್ದ ಚುಚ್ಚು ಮದ್ದುಗಳು ಈಗ ಹಿರಿಯ ನಾಗರಿಕರಿಗೂ ಲಭ್ಯವಿವೆ. ಅದರ ಲಾಭ ಪಡೆದು ಆರೋಗ್ಯಕರವಾಗಿ ಬಾಳಿರಿ. ಆರೋಗ್ಯಕರವಾಗಿ ಬಾಳಲು ಸ್ನಾಯುಗಳ ಶಕ್ತಿ ಉಳಿಸಿಕೊಳ್ಳಲು ಮಾಡಬೇಕಾದ ಕೆಲವು ಲಘು ವ್ಯಾಯಾಮಗಳನ್ನು ಪ್ರಾತ್ಯಕ್ಷಿತೆಯ ಮೂಲಕ ತೋರಿಸಿದರು. ಸ್ನಾತಕ್ಕೋತರ ವಿದ್ಯಾರ್ಥಿ ಡಾ. ಗೀರೀಶ ಚಿಕ್ಕಾವರೆ ಅವರು ಭಾಗವಹಿಸಿದ್ದರು. 

ಹಿರಿಯರ ಆರೋಗ್ಯ ನೋಡಿಕೊಳ್ಳುವ ಆರೈಕೆ ಮಾಡುವವರಿಗೂ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಾದೇವ ಹಾಲಳ್ಳಿ, ಅಧ್ಯಕ್ಷರು ರೋಟರಿ ಪ್ರೋಬಸ್ ಕ್ಲಬ್ ಉತ್ತರ ಇವರು ಮಾತನಾಡಿ ಹಿರಿಯ ನಾಗರಿಕರು ಇಂತಹ ತಜ್ಞ ವೈದ್ಯರ ಸಲಹೆಯಂತೆ ಆರೋಗ್ಯಕರ ಜೀವನ ಕ್ರಮಗಳನ್ನು ಅಳವಡಿಸಿಕೊಂಡು, ಸರಕಾರದ, ಬಿಎಲ್‌ಡಿಇ ಆಸ್ಪತ್ರೆಯ ವಿಶೇಷ ಯೋಜನೆಗಳ ಲಾಭ ಪಡೆಯಲು ಕೋರಿದರು. ಶಂಕರ ತದ್ದೆವಾಡಿ ಪ್ರಾರ್ಥನೆ ಸಲ್ಲಿಸಿದರು. ಸುಭಾಸ ಬೆಟಗೇರಿ ಸ್ವಾಗತಿಸಿದರು. ಜಗದೀಶ ಮೋಟಗಿ ವಂದಿಸಿದರು. ಡಾ. ಶಿವಮೂರ್ತಿ ಹಿರೇಮಠ ನಿರೂಪಿಸಿದರು. ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವೇದಿಕಾ ಯಳಸಂಗಿ ಅವರನ್ನು ಸತ್ಕರಿಸಲಾಯಿತು. ಸದಸ್ಯರ ಹುಟ್ಟು ಹಬ್ಬಕ್ಕೆ ಶುಭ ಕೋರಲಾಯಿತು. 

ಹಿರಿಯರಾದ ವಿ.ಸಿ.ನಾಗಠಾಣ ಸಹದೇವ ನಾಡಗೌಡ, ಡಾ. ವಾಯ್‌. ಬಿ. ಪಟ್ಟಣಶೆಟ್ಟಿ, ಮ.ಗು. ಯಾದವಾಡ, ಈಶ್ವರಗೊಂಡ, ನರಸಪ್ಪ ಸಿಂಧೂರ, ಎಸ್‌.ಎಮ್‌. ಹುಂಡೇಕಾರ, ವಿಠ್ಠಲ ಕಾಳೆ, ಅಕ್ಕಮಹಾದೇವಿ ಬುರ್ಲಿ, ರಶ್ಮಿ ಚಿತ್ತವಾಡಗಿ ಮುಂತಾದ 65 ಜನ ಹಿರಿಯ ನಾಗರಿಕರು ಭಾಗವಹಿಸಿದ್ದರು.