ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ-ಡಾ. ರವಿ ಗೋಲಾ

ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ-ಡಾ. ರವಿ ಗೋಲಾ Winning and losing are not important in sports - Dr. Ravi Gola


ವಿಜಯಪುರ 06 ಕಬ್ಬಡ್ಡಿಯು 4000 ವರ್ಷಗಳಷ್ಟು ಪುರಾತನವಾದ ಮತ್ತು ನಮ್ಮ ದೇಶದ ಗ್ರಾಮೀಣ ಕ್ರೀಡೆಯಾಗಿದೆ. ಇದು ಎರಡು ತಂಡಗಳ ನಡುವಿನ ಸಂಪರ್ಕದ ಕ್ರೀಡೆಯಾಗಿದೆ. ಈ ಕ್ರೀಡೆಯು ನಮ್ಮ ದೇಶಕ್ಕೆ ಹೆಗ್ಗಳಿಕೆಯನ್ನು ತಂದು ಕೊಟ್ಟಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಕ್ರೀಡಾಸಕ್ತಿ ಮತ್ತು ಸ್ಪೂರ್ತಿಯೊಂದಿಗೆ ಆಟವಾಡಬೇಕು ಎಂದು ಡಾ. ರವಿ ಗೋಲಾ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎರಡನೇಯ ವಲಯದ ಅಂತರ ಮಹಾವಿದ್ಯಾಲಯಗಳ ಪುರುಷರ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ,ದೈಹಿಕ ಸಾಮರ್ಥ್ಯವಿದ್ದರೆ ಮಾತ್ರ ಬೌದ್ಧಿಕತೆ ಬೆಳೆಯುವುದು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದಾಗ ಮಾತ್ರ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಗೊಳಿಸುತ್ತದೆ. ಆದ್ದರಿಂದ ಸದೃಢ ಆರೋಗ್ಯಕ್ಕಾಗಿ ಯಾವುದಾದರೊಂದು ಆಟವನ್ನು ಸದಾ ಆಡಲೇಬೇಕು. ಅದರಲ್ಲೂ ನಮ್ಮ ಗ್ರಾಮೀಣ ಮತ್ತು ಗಂಡು ಮೆಟ್ಟಿನ ನಾಡಿನ ಪ್ರಬಲ ಆಟವಾದ ಕಬ್ಬಡ್ಡಿಯನ್ನು ಆಡುತ್ತಾ, ಮುಂದಿನ ಯುವ ಜನಾಂಗಕ್ಕಾಗಿ ಉಳಿಸಿ-ಬೆಳೆಸುವ ಕಾರ್ಯ ಮಾಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದರು.  

ಇನ್ನೊರ್ವ ಅತಿಥಿ ಡಾ. ರಾಜಶೇಖರ ಬೆನಕನಹಳ್ಳಿ ಅವರು ಮಾತನಾಡಿ, ಜನಪದ ಸಾಹಿತ್ಯದಲ್ಲಿ ತಾಯಿ ತನ್ನ ಗರತಿಯ ಹಾಡುಗಳಲ್ಲಿ 'ಆಡಿ ಬಾ ನನಕಂದ, ಅಂಗಾಲ ತೊಲದೇನ' ಎಂಬ ಹಾಡಿನಿಂದ ಕ್ರೀಡೆಗೆ ಅದೇಷ್ಟು ಮಹತ್ವವನ್ನು ನೀಡಿದ್ದರೆಂಬುದನ್ನು ತಿಳಿದುಕೊಳ್ಳಬಹುದು. ಇಂದಿನ ಒತ್ತಡಮಹ ಮತ್ತು ಸಂಘರ್ಷಮಯವಾದ ಬದುಕಿನಲ್ಲಿ ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಆರೋಗ್ಯ ಹೊಂದಲು ಯೋಗ, ಧ್ಯಾನ, ವ್ಯಾಯಾಮ, ದೈಹಿಕ ಕಸರತ್ತು ಮತ್ತು ಕ್ರೀಡೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಕ್ರೀಡಾಕೂಟಗಳಲ್ಲಿ ಬಹುಮಾನ ಪಡೆಯುವುದಕ್ಕಿಂತ ಸಕ್ರೀಯವಾಗಿ ಭಾಗವಹಿಸುವುದು ಬಹು ಮುಖ್ಯವಾಗಿದೆ ಎಂದರು. 

ಕಾಲೇಜಿನ ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ. ಆರ್‌.ಎಸ್‌.ಕುರಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಸಂಗಮೇಶ ಗುರವ ಇನ್ನಿತರರು ಸಹ ವೇದಿಕೆಯ ಮೇಲಿದ್ದರು.ಡಾ. ಶಿವಾನಂದ ಜಮಾದಾರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸುನೀಲ ಹತ್ತಿ ಅತಿಥಿಗಳ ಪರಿಚಯಿಸಿದರು. ಪ್ರೊ. ಎಂ.ಎಸ್‌.ಖೊದ್ನಾಪೂರ ವಂದಿಸಿದರು.ಈ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.