ಉತ್ತರ ಪ್ರದೇಶದಲ್ಲಿ ವ್ಯಾಪಕ ಭದ್ರತೆ : ಅನೇಕ ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆ ಸ್ಥಗಿತ

ಲಖನೌ, ಡಿ 27,_ ಉತ್ತರಪ್ರದೇಶದಲ್ಲಿ  ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಶುಕ್ರವಾರದ ಪ್ರಾರ್ಥನೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಶಾಂತಿ ಸಮಿತಿಗಳ ಸಭೆಗಳನ್ನು ನಡೆಸುವುದರೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದಾರೆ.  ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ರಾತ್ರಿಯಿಂದ ಅಲಿಗಢ, ಆಗ್ರಾ, ಮಥುರಾ ಮತ್ತು ಬುಲಂದ್‌ಶಹರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಂತರ್ಜಾಲ (ಇಂಟರ್‍ ನೆಟ್‍) ಸೇವೆಗಳನ್ನು ನಿರ್ಬಂಧಿಸಲಾಗಿದೆ. ಈ ಮಧ್ಯೆ,  ಇತ್ತೀಚಿನ ಪ್ರತಿಭಟನೆಗಳಲ್ಲಿ ಸಾರ್ವಜನಿಕ ಆಸ್ತಿಗೆ ಆದ ಹಾನಿಗೆ ನಷ್ಟವನ್ನು ತುಂಬಿಕೊಡುವ ನಿಟ್ಟಿನಲ್ಲಿ 498 ಗಲಭೆಕೋರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವರಿಗೆ ರಾಜ್ಯ ಪೊಲೀಸರು  ನೋಟಿಸ್ ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಗಲಭೆಗಳು ನಡೆದು ಹಲವರು ಮೃತಪಟ್ಟಿದ್ದರು. ಗಲಭೆಗಳ ವೇಳೆ ಸರ್ಕಾರಿ ಬಸ್‍ಗಳು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗೆ ತೀವ್ರ ಹಾನಿಯನ್ನುಂಟುಮಾಡಲಾಗಿತ್ತು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಗಲಭೆಕೋರರು ನಷ್ಟ ಭರಿಸುವ ಕ್ರಮವನ್ನು ತೆಗೆದುಕೊಂಡಿದೆ.