ಬಿತ್ತಿದಂತೆ ಬೆಳೆ, ಒಗ್ಗಟ್ಟಿಗಿದೆ ಬೆಲೆ

ಬಂಧಗಳನ್ನು ಬೆಸೆದುಕೊಳ್ಳುವ ರೀತಿ ಕೇವಲ ಮನುಷ್ಯ ಜೀವಿಗೆ ಮಾತ್ರ ಸೀಮಿತವಲ್ಲ. ಪ್ರಾಣಿ, ಪಕ್ಷಿ, ಸಸ್ಯಸಂಕೂಲಕ್ಕೂ ಸೇರಿದೆ. ತನ್ನವರು, ತಮ್ಮವರು ಎಂದು ತನ್ನ ಬಳಗವನ್ನು ಸೇರಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುತ್ತದೆ. ತನ್ನ ಜೊತೆ ತನ್ನ ಮರಿ ಅಥವಾ ಮಕ್ಕಳಿಗೂ ಜೊತೆಯಾಗಿ ಬದುಕುವುದು ಹೇಗೆ ಎಂದು ಪ್ರಕೃತಿ ಮೂಲಕವಾಗಿಯೇ ತಿಳಿಸಿಕೊಡುತ್ತದೆ. ಕಾಗೆಯೊಂದು ತನ್ನ ಬಳಗವನ್ನು ಕರೆಯದೆ ಆಹಾರ ತಿನ್ನುವುದಿಲ್ಲ, ಬೆಕ್ಕು ತನ್ನ ಜೊತೆಗೆ ಇರುವ ಇನ್ನೊಂದು ಬೆಕ್ಕಿಗೆ ಕೂಗದೆ ಹಾಲು ಕುಡಿಯುವುದಿಲ್ಲ. ಎರಡು ಮೂರು ನಾಯಿಗಳಿದ್ದರೆ ಕಾಡು ಪ್ರಾಣಿಗಳನ್ನು ಅಥವಾ ಮಂಗಗಳನ್ನು ಓಡಿಸಲು ಹೋದರೆ ತಿರುಗಿ ಬರುವಾಗ ಒಂದೆ ಬರುವುದಿಲ್ಲ, ಉಳಿದವುಗಳು ಬಂದವೇ ಎಂದು ನೋಡಿಕೊಂಡು ಅವರದೇ ಭಾಷೆಯಲ್ಲಿ ಸಾಕು ಬಾರ​‍್ಪ ಎಂದು ಕರೆದುಕೊಂಡೆ ತಿರುಗಿ ಮನೆಗೆ ಬರುತ್ತವೆ. ಹಸುಗಳು ಕಾಡಿಗೆ ಮೇಯಲು ಹೋದರೆ ಜೊತೆಯಗಿಯೇ ಇರುತ್ತವೆ. ಅಂದರೆ ಜೀವಿಗಳಿಗೆಲ್ಲವಕ್ಕೂ ಜೊತೆಜೊತೆಯಾಗಿ ಬದುಕಬೇಕು ಎನ್ನುವ ಪಾಠ ಪ್ರಕೃತಿಯಲ್ಲಿಯೇ ಇದೆ. ಆದರೆ ಮನುಷ್ಯ ಮಾತ್ರ ಸಂಘ ಜೀವಿ, ಒಟ್ಟಾಗಿ ಬಾಳುವುದು ಕಲಿತಿದ್ದಾನೆ ಎನ್ನುವುದು ಎಲ್ಲೋ ತಪ್ಪಾದೀತೇನೋ ಅನ್ನಿಸುತ್ತದೆ 

ನಾವು ಆಲದ ಮರವನ್ನು ಕಾಣುತ್ತೇವೆ. ಅದು ತನ್ನನ್ನು ಬಿಗಿಯಾಗಿಸಿಕೊಳ್ಳಲು ತನ್ನ ಒಡಲಲ್ಲಿಯೇ ತನ್ನ ಮಕ್ಕಳು ಎನನುವಂತೆ ಬಿಳೆಲುಗಳನ್ನು ಬಿಟ್ಟುಕೊಳ್ಳುತ್ತದೆ. ಯಾವುದೇ ಗಾಳಿ, ಮಳೆಗೂ ಜಗ್ಗದೇ ನಿಲ್ಲುತ್ತದೆ. ಆ ಮರದಲ್ಲಿ ಅನೇಕ ಜೀವಿಗಳಿಗೆ ಬದುಕಲು ಅವಕಾಶವನ್ನು ನೀಡುತ್ತದೆ. ನೂರಾರು ವರ್ಷಗಳು ಸೃಷ್ಟಿಯ ಎಲ್ಲ ಜೀವಿಗಳ ಜೊತೆ ಬದುಕುತ್ತದೆ.  

ನಮಗೆ ಗೊತ್ತಿಲ್ಲದೇ ಸಾಕಷ್ಟು ಅಚ್ಚರಿಯ ಸಹಬಾಳ್ವೆ ನಡೆಸುವ ಜೀವಿಗಳಿದ್ದಾವೆ. ಕ್ಯಾಲಿಫೋರ್ನಿಯಾದ ದಕ್ಷಿಣ ಕರಾವಳಿಯಲ್ಲಿ ಸಿಕ್ವೋಯಾ ಎನ್ನುವ ರೆಡ್‌ವುಡ್ ಪ್ರಭೇದದ ಮರಗಳು ಬೆಳೆಯುತ್ತವೆ. ಈ ಮರಗಳು ಅದೆಷ್ಟು ಅಂಟಿಕೊಂಡಿರುತ್ತವೆ ಎಂದರೆ ಸಾವಿರಾರು ವರ್ಷಗಳ ಕಾಲ ಜೊತೆಜೊತೆಯಲ್ಲಿ ಬದುಕಿ ಬಾಳುತ್ತವೆ. ಸುಮಾರು ಮುನ್ನೂರು ಅಡಿಗಳಷ್ಟು ಎತ್ತರ ಬೆಳೆವ ಈ ಮರವು ಅದರ ಬೇರು ಮಾತ್ರ ಕೇಲವು ಅಡಿಯಾಳಕ್ಕೆ ಅಂದರೆ ಹತ್ತರಿಂದ ಇಪ್ಪತ್ತು ಅಡಿಗಳಷ್ಟು ಆಳಕ್ಕೆ ಇಳಿಯುತ್ತದೆ. ಧೈತ್ಯ ಮರವು ಬೇರುಗಳನ್ನು ಕಡಿಮೆ ಪ್ರಮಾಣದಲ್ಲಿ ಬಿಟ್ಟುಕೊಂಡು ಅಷ್ಟೊಂದು ವರ್ಷ ಬಾಳುವುದು ಹೇಗೆ ಎಂದು ಒಂದು ಸಲ ಯೋಚಿಸುವಂತಾಗುತ್ತದೆ. ಈ ಮರದ ಬೇರುಗಳು ಇನ್ನೊಂದು ಮರದ ಬೇರನ್ನು ಹುಡುಕಿಕೊಂಡು ಹೋಗುತ್ತವೆಯಂತೆ. ಆ ಎರಡು ಮರಗಳ ಬೇರು ಹೆಣೆದುಕೊಂಡು ಒಂದಕ್ಕೊಂದು ಆಧಾರವಾಗಿ ನಿಲ್ಲುತ್ತವೆಯಂತೆ. ಅಂದರೆ ತನ್ನ ಸುತ್ತಮುತ್ತ ಇರುವ ಮರಗಳ ಬೇರುಗಳನ್ನು ತನ್ನ ಬೇರಿನ ಜೊತೆ ಹೆಣೆದುಕೊಳ್ಳುತ್ತವೆ. ಹೀಗೆ ಒಂದಕ್ಕೊಂದು ಹೆಣೆದುಕೊಂಡ ಬೇರುಗಳು ಮರವು ನೆಲಬಿಟ್ಟು ಧರೆಗೆ ಉರುಳದಂತೆ ನೋಡಿಕೊಳ್ಳುತ್ತದೆ. ಈ ಕಾಡು ಸುಮಾರು ಐದುನೂರರಿಂದ ಆರನೂರು ಕಿಲೋಮೀಟರ್ ಉದ್ದಕ್ಕೆ ಬೆಳೆದು ನಿಂತಿದೆ. ಮರದ ಕಾಂಡಗಳು, ತೊಗಟೆಗಳು ಸಹ ಬಲಿಷ್ಟ ಆಗಿರುವುದರಿಂದ ಅವು ಅಷ್ಟೊಂದು ವರ್ಷ ಬಾಳಬಲ್ಲವು. ಅಂದರೆ ಮರ ಬೆಳೆದು ನಿಲ್ಲಲು ಬೇರುಗಳು ತಮ್ಮ ಬಲವನ್ನು ಜೊತೆಯಾಗಿ ಹೆಣೆದುಕೊಂಡು ಕೂಡಿಕೊಂಡು ಸಹಾಯಕವಾಗಿದೆ ಎಂದರ್ಥ. 

ಹಾಗಿದ್ದಾಗ ಮನುಷ್ಯ ಸಂಘ ಜೀವಿ ಎನ್ನುವುದರಲ್ಲಿ ವಿಶೇಷವಲ್ಲ. ಆದರೂ ಮನುಷ್ಯ ತನ್ನ ಸಂಘದವರೊಟ್ಟಿಗೆ ಯುದ್ಧಕ್ಕೆ ನಿಲ್ಲುವುದು ವಿಪರ್ಯಾಸ. ಪ್ರಕೃತಿಗೆ ಉಳಿದೆಲ್ಲ ಜೀವಿಗಳಿಗಿಂತ ಮನುಷ್ಯನೇ ಅತೀ ಕಂಟಕನಾಗಿಬಿಟ್ಟಿದ್ದಾನೆ. ಒಳ್ಳೆಯದನ್ನು ಮಗುವಿದ್ದಾಗಲೇ ಹೇಳಿಕೊಡುವುದರ ಕೊರತೆಯೋ, ಅಥವಾ ಕೆಲವು ಅನುವಂಶಿಕವೋ ತಿಳಿಯದು. ಆದರೆ ಮನುಷ್ಯ ನಾಗರಿಕತೆ ಬೆಳೆಸಿಕೊಳ್ಳುತ್ತಿದ್ದಂತೆ ಸಂಕುಚಿತಕ್ಕೆ ಸೇರಿಬಿಟ್ಟಿದ್ದಾನೆ.  

ಮಗುವನ್ನು ಬೆಳೆಸುವುದು ಅಂದಾಗ ನಮ್ಮ ಭಾರತದಲ್ಲಿ ಹೆಣ್ಣೊಬ್ಬಳು ಗರ್ಭವತಿಯಾದರೆ ನಡೆಸಿಕೋಳ್ಳುವ ರೀತಿ ರಿವಾಜುಗಳು ಗೊತ್ತು. ಹಾಗೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಗರ್ಭವತಿಯನ್ನು ಆರೈಕೆ ಮಾಡುತ್ತಾರೆ. ಅಲ್ಲಿ ತಾಯಿಯ ಕಾಳಜಿಯ ಜೊತೆ ಮುಖ್ಯವಾಗಿ ಎಳೆಯ ಶಿಶುವಿನ ಬೆಳವಣಿಗೆಯ ಆ ಹಂತದ ವಾತಾವರಣವು ಹೇಗಿರಬೇಕು ಎನ್ನುವ ಕಾಳಜಿಯೂ ಇರುತ್ತದೆ. ಕೋರಿಯಾ ದೇಶದಲ್ಲಿ ಟ್ಯಾಗ್ಯೋ ಎನ್ನುವಂಥಹ ಒಂದು ಹೆಸರು ಇದೆ. ಇದು ಶಿಶುವಿನ ಜನನಕ್ಕೆ ಮುನ್ನ ಗರ್ಬಿಣಿಯರಿಗೆ ನೀಡುವ ಸಂಸ್ಕಾರ. ಇದು 1398 ರಿಂದ 1910 ಸಮಯದಲ್ಲಿ ಹೆಚ್ಚಿಗೆ ಪ್ರಖ್ಯಾತಿ ಪಡೆದುಕೊಂಡ ಸಂಸ್ಕಾರ. ಈ ಸಂಸ್ಕಾರದಲ್ಲಿ ನಮ್ಮಲ್ಲಿಯಂತೆ ಒಳ್ಳೆಯದನ್ನು ನೋಡು, ಒಳ್ಳೆಯದನ್ನು ಕೇಳು, ಒಳ್ಳೆಯ ಕೆಲಸದಲ್ಲಿ ಭಾಗಿಯಾಗು ಎನ್ನುವ ಎಲ್ಲ ಅಂಶಗಳನ್ನು ಒಳಗೊಂಡಿದೆ. ಅದರ ಜೊತೆ ಅವಳ ಸುತ್ತ ಇರುವ ಗಂಡ, ಅತ್ತೆ, ಮಾವ, ಮತ್ತು ತಾಯಿಯ ಪಾತ್ರ ಬಹಳವೇ ಮುಖ್ಯವಾಗಿದೆ. ಕೇವಲ ಗರ್ಭೀಣಿ ಹೆಂಗಸು ಮಾತ್ರ ಒಳ್ಳೆಯದನ್ನು ನೋಡುವುದು, ಕೇಳುವುದು ಅಲ್ಲ. ತೀರ ಹತ್ತಿರ ಇರುವವರು  ಅವಳೊಟ್ಟಿಗೆ ಹಾಗೂ ಅವಳ ಕಿವಿಗೆ ಬಹಳ ದೂರದಲ್ಲಿ ನಿಂತು ಮಾತಾಡುತ್ತಿದ್ದರೂ ಕ್ಷೀಣವಾಗಿ ಕೇಳಿಸುವಂತಿದ್ದರೂ ಸಹ ಕೆಟ್ಟ, ಅಥವಾ ಸಿಟ್ಟಿನ ಮಾತುಗಳನ್ನು ಆಡಬಾರದು ಎನ್ನುವ ಕರಾರಿದೆ. ಗರ್ಭದ ಮಗುವಿನ ಬೆಳವಣಿಗೆಯ ಹಂತದಲ್ಲಿ ಜನನವಾದ ಮೇಲೆ ಹತ್ತುವರ್ಷದಲ್ಲಿ ಏನು ಕಲಿಯುತ್ತದೋ ಅಷ್ಟು ಕಲಿತುಕೊಳ್ಳುತ್ತದೆ. ಹಾಗಾಗಿ ತಾಯಿಯ ಜೊತೆ ತಂದೆಯ ನಡುವಳಿಕೆ ಸಹ ಭ್ರೂಣಕ್ಕೆ ಶಿಕ್ಷಣವಾಗುತ್ತದೆ. ತಾಯಿ ಕೊಳೆತ ಹೂವುಗಳನ್ನು, ನಾರುವ ಮಾಂಸಗಳನ್ನು, ತುಂಡಾದ ತರಕಾರಿಗಳನ್ನು ನೋಡಬಾರದು, ಮತ್ತು ಸೇವಿಸಬಾರದು. ಯಾವುದೋ ಸಂಕಷ್ಟ ಗಂಡನಿಗೆ ಬಂದಿದ್ದು, ಅವನು ಮುಖವನ್ನು ಸಪ್ಪೆ ಮಾಡಿಕೊಂಡಿರುವುದು ಗರ್ಭವತಿ ಹೆಂಡತಿ ನೋಡಿ ತಾನು ಅವನ ಕಷ್ಟಕ್ಕೆ ಭಾಗಿಯಾದರೆ ಮಗುವು ಮುಂದೆ ಅದರಿಂದ ಹಿಂಜರಿಯುತ್ತದೆ, ದುಃಖವನ್ನು ತಡೆದುಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತದೆ, ತಪ್ಪಿಲ್ಲದೆಯೂ ತನ್ನಿಂದ ಏನೋ ತಪ್ಪಾಗಿದೆ ಎನ್ನುವಂತೆ ಹೆದರುತ್ತದೆ. ಗಂಡ ಸಿಟ್ಟು ಸೇಡು ಎಂದು ಹೋದರೆ, ಮುಂದೆ ಮಗುವೂ ಸಹ ಅದೇ ರೀತಿಯಾಗಿ ನಡೆದುಕೊಳ್ಳುತ್ತದೆ. ಒಂದು ದಿನದ ತಂದೆತಾಯಿಯ ಕೆಟ್ಟ ನಡತೆ ಮಗುವಿನ ಭವಿಷ್ಯದಲ್ಲಿ ಶಾಶ್ವತವಗಿಯೂ ಇರಬಹುದು. ಹಾಗಾಗಿ ತಂದೆ ತನ್ನ ಕೆಟ್ಟ ನಡತೆಯನ್ನು ಮರೆಮಾಚಿ ಗರ್ಭವತಿ ಮಡದಿ ಎದುರು ನಿಲ್ಲಬೇಕು. ಅಲ್ಲದೇ ಎಲ್ಲರೊಟ್ಟಿಗೆ ಜೊತೆಯಾಗಿ ಊಟ, ತಿಂಡಿ, ಮಾಡಬೇಕು. ಗರ್ಭವತಿಯ ಭೌತಿಕ ಮತ್ತು ಮಾನಸಿಕ ಗಟ್ಟಿತನ ಮಗುವಿನ ಭವಿಷ್ಯದ ರೂಪಿಸುತ್ತದೆ. ಗರ್ಭವತಿ ಸಮಾಜದಲ್ಲಿ ತನ್ನವರನ್ನು, ಸಂಬಂಧಿಗಳನ್ನು, ಪ್ರಾಣಿ ಪಕ್ಷಿಗಳನ್ನು ಹೆಚ್ಚೆಚ್ಚು ಪ್ರೀತಿಸಿದಷ್ಟು ಮಗು ಅದೇ ಸಂಸ್ಕಾರವನ್ನು ಕಲಿತು ಬೆಳೆಯುತ್ತಿದ್ದಂತೆ ಸಮಾಜದಲ್ಲಿ ಎಲ್ಲರನ್ನು ಒಟ್ಟು ಗೂಡಿಸಿಕೊಂಡು ಹೋಗುವ ಮನಸ್ಸು ಹೊಂದುತ್ತದೆ ಎನ್ನುವ ಸಾರಾಂಶವಾಗಿ ಟ್ಯಾಗೋವನ್ನು ಗರ್ಭವತಿಗೆ ನೀಡುತ್ತಾರೆ. 

ಒಟ್ಟಾರೆ ಹೇಳಬೇಕೆಂದರೆ ಭೂಮಿಯ ಮೇಲೆ ಬಂದಂತಹ ಜೀವಿಗಳು ಕೂಡಿ ಬಾಳಿದರೆ ಮಾತ್ರ ಸ್ವರ್ಗ, ಎಲ್ಲಿ ತಾಮಸ, ದ್ವೇಶ, ಸೇಡು ಇಂಥಹವುಗಳು ಹಟ್ಟಿಕೊಳ್ಳುತ್ತವೆಯೋ ಅಲ್ಲಿ ನರಕ ಸೃಷ್ಟಿಯಾಗುವುದು, ಇಂದಿನ ಮಗು ನಾಳೆಯ ಪ್ರಜೆ. ಆ ಪ್ರಜೆ ಹೇಗಿರಬೇಕು ಎನ್ನುವ ಸೃಷ್ಟಿ ತಾಯಿತಂದೆಯರ ಬಹುದೊಡ್ಡ ಹೊಣೆಗಾರಿಕೆ. ಇತಿಹಾಸ ಪುಟಗಳನ್ನು ತೆರೆದಾಗ ಅದೆಷ್ಟು ಕ್ಷುಲ್ಲಕ ಕಾರಣಕ್ಕೆ ಯುದ್ಧಗಳು ನಡೆದು ಹೋಗಿವೆ. ಪ್ರಕೃತಿಯ ವಿರುದ್ಧವಾಗಿ ಯುದ್ಧಗಳು, ಹೊಡೆದಾಟಗಳು, ಬಾಂಬ್ ದಾಳಿಗಳು ನಡೆದಿವೆ. ಮನುಷ್ಯ ಸಂಘಜೀವಿಯೋ ಅಥವಾ ತನ್ನವರ ಸಂಘಕ್ಕೆ ಬೆಂಕಿ ಇಡುವ ವಿಷಬೀಜವೋ ಎನ್ನುವಂತೆ ಹಲವು ಬಾರಿ ಭಾಸವಾಗುತ್ತದೆ. ಬಿತ್ತಿದಂತೆ ಬೆಳೆ ಎನ್ನುವ ನಾಣ್ಣುಡಿಯಂತೆ ಸಂಬಂಧಗಳನ್ನು ಬೆಸೆದುಕೊಂಡು ಬದುಕುವ ಕಲೆಯನ್ನು ಎಳೆವೆಯಲ್ಲಿಯೇ ಮೂಡಿದರೆ ಬಲಿತ ಮನಸ್ಸುಗಳು ತನ್ನೊಟ್ಟಿಗೆ ಇತರರನ್ನು ಕೂಡಿಸಿಕೊಂಡು ಸಶಕ್ತ ಸಮಾಜ ಸೃಷ್ಟಿಸಿ ಬದುಕಲು ಸಾಧ್ಯವಾಗುವುದು. 

- * * * -