ಬಿಜೆಪಿ, ಬಡವರಿಗೆ ಅನುಕೂಲವಾಗುವ ಕೆಲಸ ಮಾಡಿದ್ದಾದರೂ ಏನು : ಶಾಸಕ ಪಠಾಣ

ಬಿಜೆಪಿ, ಬಡವರಿಗೆ ಅನುಕೂಲವಾಗುವ ಕೆಲಸ ಮಾಡಿದ್ದಾದರೂ ಏನು : ಶಾಸಕ ಪಠಾಣ What exactly has the BJP done to benefit the poor? – MLA Pathan

ಶಿಗ್ಗಾವಿ  11: ಬಡವರಿಗೆ ಹಕ್ಕುಪತ್ರ ವಿತರಿಸಿ ಗ್ಯಾರಂಟಿ ಯೋಜನೆ ನೀಡಿರುವ ಕಾಂಗ್ರೆಸ್ ಸರಕಾರವನ್ನು ಟೀಕಿಸುತ್ತಿರುವ ಬಿಜೆಪಿಯನ್ನು ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಧೂಳಿಪಟ ಮಾಡಬೇಕು ಎಂದು ಶಾಸಕ ಯಾಸೀರಖಾನ್ ಪಠಾಣ ಕರೆ ನೀಡಿದರು. ತಾಲೂಕಿನ ಅತ್ತಿಗೇರಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು ಸ್ವಾರ್ಥ ರಾಜಕೀಯಕ್ಕಾಗಿ ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಟೀಕಿಸುತ್ತಿರುವ ಬಿಜೆಪಿ, ಬಡವರಿಗೆ ಅನುಕೂಲವಾಗುವ ಕೆಲಸ ಮಾಡಿದ್ದಾದರೂ ಏನು? ನಿಮ್ಮ ಹತ್ತಿರ ಮತ ಕೇಳಲು ಬಂದಾಗ ಪ್ರಶ್ನೆ ಮಾಡಬೇಕು ಎಂದರು. ಜನರಬೇಡಿಕೆ ಈಡೇರಿಸುವ ಪ್ರಾಮಾಣಿಕ ಕೆಲಸ ಮುಂದುವರಿದಿದೆ. 1.5 ವರ್ಷದಲ್ಲಿ ಕ್ಷೇತ್ರದಲ್ಲಿ 8 ಸಾವಿರ ಹಕ್ಕುಪತ್ರ ನೀಡಿದ್ದೇನೆ.  

20ತಿಂಗಳಲ್ಲಿ ಇನ್ನೂ 12 ಸಾವಿರ ಹಕ್ಕುಪತ್ರ ನೀಡುತ್ತೇನೆ. ಕ್ಷೇತ್ರದಲ್ಲಿ 1ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ಇಲ್ಲ. ಎಲ್ಲರಿಗೂ ಹಕ್ಕುಪತ್ರ ವಿತರಿಸುವ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ 1500 ಕೋಟಿ ಅನುದಾನ ತಂದಿದ್ದೇನೆ. 450 ದೇವಸ್ಥಾನಗಳ ಅಭಿವೃದ್ಧಿ ಮಾಡುತ್ತಿದ್ದೇವೆ. 21 ಕೆಪಿಎಸ್ಸಿ ಶಾಲೆ ಮಂಜೂರಾಗಿದೆ. 350 ಕೋಟಿ ವೆಚ್ಚದಲ್ಲಿ ಬಂಕಾಪುರ, ಶಿಗ್ಗಾವಿ, ಸವಣೂರ ಪಟ್ಟಣಗಳಿಗೆ ಶಾಶ್ವತ ಕುಡಿಯವ ನೀರಿನ ಯೋಜನೆಗೆ ಅನುದಾನ ತಂದಿದ್ದೇನೆ. ಅತ್ತಿಗೇರಿ ಗ್ರಾಮದ ಕೆರೆ, ರಸ್ತೆ, ದೇವಸ್ಥಾನಗಳ ಅಭಿವೃದ್ಧಿಪಡಿಸುತ್ತೇನೆ ಎಂದು ತಿಳಿಸಿದರು.  ಕೆಎಂಎಫ್ ನಿರ್ದೇಶಕ ಶಂಕರಗೌಡ್ರ ಪಾಟೀಲ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕು ಅಧ್ಯಕ್ಷ ಎಸ್‌. ಎಫ್‌.ಮಣಕಟ್ಟಿ ಮಲ್ಲಿಕಾರ್ಜುನಗೌಡ ಪಾಟೀಲ, ಅಣ್ಣಪ್ಪ ಲಮಾಣಿ, ಅದ್ದು ತೋಟದ ಮತ್ತಿತರರು ಉಪಸ್ಥಿತರಿದ್ದರು.