ಬೆಂಗಳೂರು, ಏ.14, ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಎಲ್ಲರೂ ಲಾಕ್ ಡೌನ್ ನಿಯಮ ಪಾಲಿಸಲೇಬೇಕು. ನಿಯಮ ಮುರಿದರೆ ಮತ್ತಷ್ಟು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಟ್ ಸ್ಪಾಟ್ ಗಳಲ್ಲಿ ಮತ್ತಷ್ಟು ಕಠಿಣವಾದ ನೀತಿ ಜಾರಿಗೆ ಬರಲಿದೆ. ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೆರವಾಗಿ ಎಂದು ಮನವಿ ಮಾಡಿದರು.ಕೃಷಿಕರಿಗೆ ಯಾವುದೇ ತೊಂದರೆ ಆಗದಂತೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡಿದ್ದೇವೆ.ಇಂದಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತೇವೆ. ರಾಜ್ಯದಲ್ಲಿ ಈ ವರೆಗೆ 57633 ವಾಹನಗಳನ್ನು ಜಪ್ತಿ ಮಾಡಿದ್ದೇವೆ. ನಿಮಯ ಉಲ್ಲಂಘಿಸಿದ 2185 ಜನರ ಮೇಲೆ ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಇಂದಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ.ಕೇಂದ್ರ ಸರ್ಕಾರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 3 ರ ವರೆಗೆ ಲಾಕ್ ಡೌನನ್ನು ವಿಸ್ತರಿಸಿರುವುದನ್ನು ಸ್ವಾಗತಿಸಿದ ಯಡಿಯೂರಪ್ಪ, ಭಾರತ ಸರ್ಕಾರ ನಾಳೆ ಹೊರಡಿಸಲಿರುವ ಮಾರ್ಗಸೂಚಿಗಳ ಅನುಸಾರ ಕರ್ನಾಟಕ ಸರ್ಕಾರ ಲಾಕ್ ಡೌನ್ ಅನ್ನು ಸಮರ್ಪಕವಾಗಿ ಪಾಲನೆ ಮಾಡಲಿದೆ. ಏಪ್ರಿಲ್ 20ರ ವರೆಗೆ ಪ್ರಧಾನಿಯವರು ತಿಳಿಸಿದಂತೆ ಇನ್ನಷ್ಟು ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲಿಸಲಾಗುವುದು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುವುದು. ನಾಡಿನ ಜನತೆ ಸ್ವಯಂ ಪ್ರೇರಿತರಾಗಿ ಈ ಕ್ರಮಗಳಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಪ್ರಧಾನಿಯವರು ಹೇಳಿದಂತೆ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿಯೂ ಆರೋಗ್ಯ ಸೌಲಭ್ಯಗಳನ್ನು ಕಳೆದ ಎರಡು ತಿಂಗಳಲ್ಲಿ ಹೆಚ್ಚಿಸಲಾಗಿದೆ. ಅವರು ನೀಡಿದ ಏಳು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮನೆಯ ಹಿರಿಯರ ವಿಶೇಷ ಕಾಳಜಿ ವಹಿಸಿ. ಯಾವುದೇ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಹೆಚ್ಚು ಜೋಪಾನ ಮಾಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಮಾಡಿದ ಮಾಸ್ಕ್ ಬಳಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆಯ ಸಲಹೆಗಳನ್ನು ಪಾಲಿಸಿ. ಬಿಸಿ ನೀರು, ಕಷಾಯ ಕುಡಿಯಿರಿ. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.ಬಡ ಕುಟುಂಬಗಳಿಗೆ ನೆರವಾಗಬೇಕು. ಕೃಷಿ, ಉದ್ಯೋಗದಲ್ಲಿ ಸಹೋದ್ಯೋಗಿಗಳಿಗೆ, ನೌಕರರಿಗೆ ನೆರವಾಗಿ. ನೌಕರಿಯಿಂದ ತೆಗೆಯಬಾರದು. ಪೊಲೀಸ್, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರನ್ನು ಗೌರವಿಸಬೇಕು.ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ, ಅಗತ್ಯ ವಸ್ತುಗಳ ಪೂರೈಕೆಗೆ, ಔಷಧಿ ಪೂರೈಕೆಗೆ ಯಾವುದೇ ತೊಂದರೆ ಇಲ್ಲ. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಕ್ರಮ ವಹಿಸಲಾಗುವುದು. ವಿಶೇಷವಾಗಿ ವಲಸೆ ಕಾರ್ಮಿಕರು ಎಲ್ಲಿದ್ದೀರೋ ಅಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಯಡಿಯೂರಪ್ಪ ಮನವಿ ಮಾಡಿದರು.