ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಗೆ ಸ್ವಾಗತ

ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಗೆ ಸ್ವಾಗತ Welcome to Krantiveera Sangolli Rayanna Jyothi

ಲೋಕದರ್ಶನ ವರದಿ 

ಕಾಗವಾಡ, 09 : ಪಟ್ಟಣದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಸಂಸ್ಥೆಗಳು, ಕರವೇ ಪದಾಧಿಕಾರಿಗಳು, ಅಭಿಮಾನಿಗಳು, ಕುಂಭಹೊತ್ತ ಮಹಿಳೆಯರು, ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು. 

ಶುಕ್ರವಾರ ದಿ. 09 ರಂದು ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯು ಪಟ್ಟಣದ ಚೆನ್ನಮ್ಮ ಸರ್ಕಲ್‌ಗೆ ಆಗಮಿಸುತ್ತಿದ್ದಂತೆ ಕಾಗವಾಡ ತಹಶೀಲ್ದಾರ ಹಾಗೂ ಇನ್ನಿತರ ಅಧಿಕಾರಿಗಳು, ರಾಜಕೀಯ ಮುಖಂಡರು, ಕರವೇ ಸದಸ್ಯರು ರಾಯಣ್ಣ ಜ್ಯೋತಿಗೆ ಪೂಜೆ ಸಲ್ಲಿಸಿ, ಪಟ್ಟಣಕ್ಕೆ ಜ್ಯೋತಿಯನ್ನು ಬರಮಾಡಿಕೊಂಡರು. 

ಈ ವೇಳೆ ಗ್ರೇಡ-2 ತಹಶೀಲ್ದಾರ ರಶ್ಮಿ ಜಕಾತಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಸಾಹಸ ಗಾಧೆಯನ್ನು ಜಗತ್ತಿಗೆ ಪಸರಿಸಲು ನಾಡಿನಾದ್ಯಂತ ಸಂಚರಿಸುತ್ತಿರುವ ಜ್ಯೋತಿಗೆ ಭೇದ-ಭಾವ ಮರೆತು, ಅಧಿಕಾರಿಗಳು, ಎಲ್ಲ ಜನಾಂಗದವರು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಎಂದಿಗೂ ತನಗಾಗಿ ತನ್ನ ಅಧಿಕಾರಕ್ಕಾಗಿ ಬದುಕಲಿಲ್ಲ. ನಾಡಿಗೆ ಸ್ವಾತಂತ್ರ್ಯ ದೊರಕಿಸಿ ಕೊಡಲು ತನ್ನ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು. 

ನಂತರ ವಾದ್ಯ ವೈಭವದೊಂದಿಗೆ ಪ್ರಾರಂಭವಾದ ಮೆರವಣಿಗೆ ಡೊಳ್ಳು ವಾದನ, ಜಲ ಕುಂಭ ಹೊತ್ತ ಮಹಿಳೆಯರು, ಎಲ್ಲ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಅಂಗನವಾಡಿ, ಕಾರ್ಯಕರ್ತೆಯರು, ಕರ್ನಾಟಕ ರಕ್ಷಣಾ ವೇದಿಕೆಯ ಹಾಗೂ ಕಿತ್ತೂರು ಕರ್ನಾಟಕ ಸೇನೆ ಸದಸ್ಯರು, ಅನೇಕ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮದ ಮುಖಂಡರು ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಅಥಣ ಮಾರ್ಗವಾಗಿ ಜ್ಯೋತಿಯನ್ನು ಬಿಳ್ಕೋಡಲಾಯಿತು. 

ಈ ಸಮಯದಲ್ಲಿ ಬಿಇಓ ಎಂ.ಬಿ. ಮದಭಾವಿ, ಸಿಡಿಪಿಓ ರವೀಂದ್ರ ಗುದಗೇನ್ನವರ, ಶಿರಸ್ತೆದಾರ ಎಂ.ಆರ್‌. ಪಾಟೀಲ, ಸುರೇಖಾ ಬಸನಾಯಿಕ್, ಪಿಎಸ್‌ಐ ರಾಘವೇಂದ್ರ ಖೋತ, ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್‌.ಪಿ. ತಳವಾರ, ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದು ಒಡೆಯರ, ಸಚೀನ ಗಾವಡೆ, ಬಾಬಾಸಾಬ ಕೊತ್ತಲಗಿ, ಸಿದ್ದು ಭಾನೂಸೆ, ಋಷಿ ಭಾನೂಸೆ, ಸದಾಶಿವ ಪೂಜಾರಿ ಸೇರಿದಂತೆ ಅಂಗವಾಡಿ ಕಾರ್ಯಕರ್ತೆಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.