ಆರೋಗ್ಯಕರ ಹಾಸ್ಯ ನಮಗಿಂದು ಬೇಕಾಗಿದೆ: ಗುಂಡೇನಟ್ಟಿ ಮಧುಕರ

ಆರೋಗ್ಯಕರ ಹಾಸ್ಯ ನಮಗಿಂದು ಬೇಕಾಗಿದೆ: ಗುಂಡೇನಟ್ಟಿ ಮಧುಕರ We need healthy humor today said Gundenatti Madhukar

ಲೋಕದರ್ಶನ ವರದಿ 

ಬೆಳಗಾವಿ 19: ಜನರ ನೋವನ್ನು ಮರೆಯಿಸಿಲು ಹಾಸ್ಯ ಸಂಘಟನೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳಬೇಕಾಗಿದೆ. ಹೊಸ ಹೊಸ ಹಾಸ್ಯ ಭಾಷಣಕಾರರು ಬರಬೇಕಿದೆ ಅಲ್ಲದೇ ಬೇರೆಯವರ ಮನಸ್ಸಿಗೆ ನೋವನ್ನುಂಟು ಮಾಡದ ಆರೋಗ್ಯಕರ ಹಾಸ್ಯ ನಮಗಿಂದು ಬೇಕಾಗಿದೆ. ಯಾಂತ್ರಿಕ ಜೀವನದಿಂದ ಬೇಸತ್ತಿದ್ದ ಬೆಂಗಳೂರಿನ ಜನರಿಂದು ನಕ್ಕು ಹಗುರಾಗಿದ್ದಾರೆ ಎಂದು ಬೆಳಗಾವಿಯ ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಇಂದಿಲ್ಲಿ ಹೇಳಿದರು.  

ಬೆಂಗಳೂರಿನ ಶ್ರೀನಗರ ಸಾಯಿ ಸುಮುಖ ಟೆಲಿಕಾಂ ಕ್ಲಸ್ಟರ್ ರಹವಾಸಿ ವೆಲ್ ಫೇರ್ ಸಂಘದವರು ವಾರ್ಷೀಕೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬೆಳಗಾವಿಯ ಹಾಸ್ಯಕೂಟ ಸಂಘಟನೆಯಿಂದ "ನಕ್ಕು ಹಗುರಾಗಿ" ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಗುಂಡೇನಟ್ಟಿಯವರು ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.  

ಮುಂದೆ ಮಾತನಾಡುತ್ತ ಗುಂಡೇನಟ್ಟಿಯವರು ನಿಮ್ಮ ಜೀವನದಲ್ಲಿ ಘಟಿಸಿದ ನಗೆಪ್ರಸಂಗಗಳನ್ನು ನೆನಪಿಟ್ಟುಕೊಂಡು ಬರೆದಿಟ್ಟುಕೊಳ್ಳಿ ವೇದಿಕೆಯಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಿ ಎಂದು ಹೇಳಿದರು.  

ನಗೆ ಮಾತುಗಾರ ಪ್ರೊ. ಜಿ. ಕೆ. ಕುಲಕರ್ಣಿಯವರು ಮಾತನಾಡುತ್ತ ನಗೆಯೆಂಬುದು ತಾನೆ ತಾನಾಗಿ ಆಕಾಶದಿಂದ ಉದುರಿ ಬಿಳುವಂತಹ ವಸ್ತುವಲ್ಲ. ಹಾಸ್ಯವನ್ನು ನಾವು ಅನುಭವಿಸಬೇಕು. ಅದನ್ನು ಕಾಣುವ ಕಣ್ಣು ನಮಗಿರಬೇಕು. ಅದನ್ನು ಜನರೊಂದಿಗೆ ಹಂಚಿಕೊಳ್ಳುವ ಕಲೆ ನಮಗಿರಬೇಕು ಅಂದಾಗ ಮಾತ್ರ ನಾವು ಉತ್ತಮ ನಗೆ ಮಾತುಗಾರರಾಗಲು ಸಾಧ್ಯ ಎಂದು ಹೇಳಿ ಜನರೊಂದಿಗೆ ಹಲವಾರು ನಗೆಪ್ರಸಂಗಗಳನ್ನು ಹಂಚಿಕೊಂಡರು.  

ಇನ್ನೋರ್ವ ನಗೆ ಮಾತುಗಾರ ಎಂ. ಬಿ. ಹೊಸಳ್ಳಿಯವರು ಮಾತನಾಡುತ್ತ ತಾಯಿ, ಮಡದಿ, ಮಗಳು, ಅಕ್ಕ, ತಂಗಿ ಹೀಗೆ ಹೆಣ್ಣು ಜೀವನದಲ್ಲಿ ಮಹತ್ತರವಾದ ಸ್ಥಾನ ಪಡೆಯುತ್ತಾಳೆ. ಗಂಡಸಿಗಾಗಿ ಹೆಣ್ಣು ಹಲವಾರು ತ್ಯಾಗಗಳನ್ನು ಮಾಡುತ್ತಾಳೆ. ಎಲ್ಲರೂ ಹೆಣ್ಣನ್ನು ಗೌರವಿಸೋಣ ಎಂದು ಹೇಳಿದ ಅವರು ಪತಿ, ಪತ್ನಿಯರ ನಡುವೆ ಸಾಮರಸ್ಯವಿದ್ದಾಗ ಮಾತ್ರ ಜೀವನದ ದಾರಿ ಸುಗಮವಾಗಲು ಸಾಧ್ಯ ಎಂದು ಹೇಳಿ ಹಾಸ್ಯ ಚಟಾಕಿಗಳಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದರು.  

ಜಯಸುಧಾ ಆರ್‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಕಾರ್ಯದರ್ಶಿ ಬಿ.ಎಸ್‌. ಸತ್ಯನಾರಾಯಣ, ಖಜಾಂಚಿ ಶುಭಂ ಭೋಜಕ ಉಪಸ್ಥಿತದ್ದರು.  

ಅನ್ನಪೂರ್ಣ ಪ್ರಾರ್ಥಿಸಿದರು. ಜಯಶ್ರೀ ವಂದಿಸಿದರು. ವಿದ್ಯಾವತಿ ನಿರೂಪಿಸಿದರು.