ಅಂಬೇಡ್ಕರ ಕಾಲೊನಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ
Water problem is acute in Ambedkar Colony
ಯರಗಟ್ಟಿ 16: ಸ್ಥಳೀಯ ಅಂಬೇಡ್ಕರ ಕಾಲೊನಿಯಲ್ಲಿ ಬಹುದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮಹಿಳೆಯರು, ವೃದ್ದರು, ಮಕ್ಕಳು ನೀರಿಗಾಗಿ ಪರದಾಡುತ್ತಿದ್ದಾರೆ.
ಪಟ್ಟಣ ಪಂಚಾಯಿತಿಯಿಂದ ಮನೆಗಳಿಗೆ ನಲ್ಲಿ ಅಳವಡಿಸಿಲ್ಲದ ಹಾಗೂ ಸಾರ್ವಜನಿಕವಾಗಿ ಇಲ್ಲಿ ಕೇವಲ ಒಂದೇ ನಲ್ಲಿ ಇರುವುದು ನೀರಿನ ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣವಾಗಿದೆ. ತೀವ್ರ ಸಮಸ್ಯೆ ಎದುರಾದಾಗ ನೀರು ಪೂರೈಸುವುದನ್ನು ಬಿಟ್ಟರೆ ಪಟ್ಟಣ ಪಂಚಾಯಿತಿ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಮಾಡುತ್ತಿಲ್ಲ ಎಂದು ಕಾಲೊನಿ ಜನತೆ ಆರೋಪಿಸಿದ್ದಾರೆ.
'ಸಾವಿರಾರು ಜನ ವಾಸವಿರುವ ಈ ಸ್ಥಳದಲ್ಲಿ ಕೇವಲ ಒಂದು ನಲ್ಲಿಯಲ್ಲಿ ನೀರು ಬರುತ್ತಿದ್ದು, ಅದೂ ಮೂರು ದಿನಗಳಿಂದ ಬಂದ್ ಆಗಿತ್ತು. ಇರುವ ಒಂದು ನಲ್ಲಿ ನೀರಿಗಾಗಿ ನಾವು ನಿತ್ಯ ಹೋರಾಟ ಮಾಡಬೇಕಾಗುತ್ತದೆ. ಈ ಸಮಸ್ಯೆಯನ್ನು ನೋಡಿಯೂ ನೋಡದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದ್ದಾರೆ' ಎಂದು ಅಂಬೇಡ್ಕರ ನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ನೀರಿಗಾಗಿ ಅಲೆದಾಡುವುದು ಅನಿವಾರ್ಯವಾಗಿದೆ. ಸಮೀಪದಲ್ಲಿ ನೀರುಇಲ್ಲದ ಕಾರಣ ಪಕ್ಕದ ವಾರ್ಡ್‌ಗಳ ನಲ್ಲಿಗಳಿಗೆ ಹೋದರೆ ಅಲ್ಲಿನ ಜನರು ನಮಗೆ ಸಹಕಾರ ನೀಡುತ್ತಿಲ್ಲ ಎಂದು ಜನರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಈ ಪಟ್ಟಣದಲ್ಲ್ಲಿ ಆಯಾ ವಾರ್ಡ್‌ಗಳಿಗೆ ಸಂಬಂಧಿಸಿದ ಕೊಳವೆಬಾವಿ ಕೇವಲ ಆಯಾ ವಾರ್ಡ್‌ಗೆ ಮಾತ್ರ ಮೀಸಲು. ನೀರಿನ ಕೃತಕ ಸಮಸ್ಯೆ ಉಂಟಾಗಲು ಇದು ಕಾರಣವಾಗಿದೆ. ಕೆಲವು ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಉತ್ತಮ ರೀತಿಯಲ್ಲಿ ನೀರು ಹೊಂದಿದ್ದರೂ ಬೇರೆ ವಾರ್ಡ್‌ಗೆ ನೀರು ಹರಿಸಲು ಆ ವಾರ್ಡ್ ಜನರು ವಿರೋಧಿಸುತ್ತಾರೆ.
'ನೀರಿನ ಸಮಸ್ಯೆ ಬಗೆಹರಿಸಲು ಪಟ್ಟಣ ಪಂಚಾಯಿತಿಯಿಂದ ಕೆಲವೆಡೆ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದರೂ ನೀರು ದೊರಕಿಲ್ಲ. ಅಲ್ಲದೆ ಕೆಲವು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಒಂದೆರಡು ದಿನಗಳಲ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ಭಜಂತ್ರಿ ಹೇಳಿದರು.
“ನಮ್ಮ ಕಾಲೊನಿಗೆ ನೀರಿನ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂಬುದು ನಮ್ಮ ಬಹು ದಿನಗಳ ಬೇಡಿಕೆ. ಪಟ್ಟಣ ಪಂಚಾಯಿತಿ ಬೇರೆ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತದೆ.
ಆದರೆ ನಮ್ಮ ಕಾಲೊನಿ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಖಾಲಿ ಕೊಡಗಳೊಂದಿಗೆ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಕಸ್ತೂರಿ ತಳವಾರ, ದುರ್ಗವ್ವ ಕಮತಗಿ, ಭಾರತಿ ಚನ್ನಮೇತ್ರಿ, ಲಕ್ಕವ್ವ ಉದ್ದಪ್ಪನ್ನವರ, ಮಹಾದೇವಿ ಗಿರೆವ್ವಗೋಳ, ಜಯಶ್ರೀ ಮಾಳಗಿ, ಶಾನವ್ವ ಮಾಳಗಿ, ಲಕ್ಕವ್ವ ಮಾಳಗಿ, ರತ್ನವ್ವ ಚನ್ನಮೇತ್ರಿ, ರವಿ ಭಜಂತ್ರಿ, ಸುನೀಲ ಚನ್ನಮೇತ್ರಿ, ಮೋಜಸ್ ಚನ್ನಮೇತ್ರಿ, ಪ್ರಶಾಂತ ಮಾದರ, ಮಾರುತಿ ಉದ್ದಪ್ಪನ್ನವರ, ಬಸಪ್ಪ ಕಮತಗಿ, ದುರ್ಗಪ್ಪ ಹಿರೇಮತ್ರಿ, ಮಲ್ಲಿಕಾರ್ಜುನ ಮಾಳಗಿ ಎಚ್ಚರಿಕೆ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 