ಏತ ನೀರಾವರಿ ಯೋಜನೆಯ ಏರ್ವಾಲ್ವ್‌ ಒಡೆದು ನೀರು ಚಿಮ್ಮಾಟ

ಏತ ನೀರಾವರಿ ಯೋಜನೆಯ ಏರ್ವಾಲ್ವ್‌ ಒಡೆದು ನೀರು ಚಿಮ್ಮಾಟ  Water gushes out after air valve of lift irrigation project bursts

ಲೋಕದರ್ಶನ ವರದಿ 

ಜಮಖಂಡಿ 18: ತಾಲೂಕಿನ ಕವಟಗಿ ಗ್ರಾಮದ ಸಮೀಪದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಕಾಲುವೆಯ ಏರ್ವಾಲ್ವ್‌ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಆಕಾಶದ ಎತ್ತರಕ್ಕೆ ಚಿಮ್ಮಿದ ಘಟನೆ ಶುಕ್ರವಾರ ನಡೆದಿದೆ.  

ಕವಟಗಿ ಗ್ರಾಮದ ಪುನರ್ವಸತಿ ಕೇಂದ್ರದ ಬಳಿ ಕಾಲುವೆಗೆ ಅಳವಡಿಸಲಾಗಿದ್ದ ಏರ್ವಾಲ್ವ್‌ ಏಕಾಏಕಿ ಒಡೆದಿದ್ದು, ಹೆಚ್ಚಿನ ಒತ್ತಡದಿಂದ ನೀರು ಹಲವು ಅಡಿ ಎತ್ತರಕ್ಕೆ ಚಿಮ್ಮಿತು. ಗ್ರಾಮದ ಸುಮಾರು ಒಂದು ಕಿಲೋಮೀಟರ್ ದೂರದಿಂದಲೂ ನೀರು ಚಿಮ್ಮುತ್ತಿರುವ ದೃಶ್ಯ ಗೋಚರಿಸಿದ್ದು, ಸಾರ್ವಜನಿಕರ ಗಮನ ಸೆಳೆಯಿತು.  

ಘಟನಾ ಸ್ಥಳದ ಪಕ್ಕದಲ್ಲೇ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಇದ್ದು, ಏರ್ವಾಲ್ವ್ನಿಂದ ಚಿಮ್ಮಿದ ನೀರು ಟ್ಯಾಂಕ್ನ ಎತ್ತರಕ್ಕೂ ಮೀರಿದ ದೃಶ್ಯ ಕಂಡುಬಂದಿದೆ. ಇಷ್ಟೊಂದು ಪ್ರಮಾಣದಲ್ಲಿ ನೀರು ಎತ್ತರಕ್ಕೆ ಚಿಮ್ಮುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದರು.  

ಏರ್ವಾಲ್ವ್‌ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ದುರಸ್ತಿ ಕಾರ್ಯ ಕೈಗೊಂಡು ನೀರಿನ ಪೋಲಾಗುವುದನ್ನು ತಡೆಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.