ಸುಳ್ಳು ಆರೋಪಗಳಿಗೆ ಕಾನೂನು ಹೋರಾಟದ ಎಚ್ಚರಿಕೆ: ಉಮೇಶ್ ಆಲಮೇಲಕರ

ಸುಳ್ಳು ಆರೋಪಗಳಿಗೆ ಕಾನೂನು ಹೋರಾಟದ ಎಚ್ಚರಿಕೆ: ಉಮೇಶ್ ಆಲಮೇಲಕರ Warning of legal battle against false allegations: Umesh Alamelkar

ಲೋಕದರ್ಶನ ವರದಿ 

 ಜಮಖಂಡಿ 26: ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸವಿತಾ ಕಲ್ಯಾಣಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಜಾತಾ ಸಾರವಾಡ ಸೇರಿದಂತೆ ಕೆಲವರು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹಿಂದೂ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಆಲಮೇಲಕರ ಆರೋಪಿಸಿದರು.  

ನಗರದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಮ್ಮ ವಿರುದ್ಧ ಕೆಲ ಮಹಿಳೆಯರನ್ನು ಮುಂದಿಟ್ಟುಕೊಂಡು ಷಡ್ಯಂತ್ರ ರೂಪಿಸಿ ಅಪಪ್ರಚಾರ ನಡೆಸಲಾಗುತ್ತಿದೆ. ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸುಳ್ಳು ಆರೋಪಗಳಿಗೆ ನಾವು ಹೆದರುವುದಿಲ್ಲ," ಎಂದು ಹೇಳಿದರು.  

"ಜನವರಿಯಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಲವು ಮಾಜಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಹಿರಿಯ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದ್ದರು.

ಆ ಸಭೆಗೆ ಯಾರನ್ನೂ ವಿಶೇಷವಾಗಿ ಆಹ್ವಾನಿಸಲಾಗಿರಲಿಲ್ಲ. ಇದೀಗ ಏಳು ತಿಂಗಳ ಬಳಿಕ ಈ ರೀತಿಯ ಆರೋಪಗಳು ಹೊರಬರುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ," ಎಂದು ಅವರು ಹೇಳಿದರು.  

ತಾವು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವಂತೆ ದೂರವಾಣಿ ಕರೆಗಳ ಮೂಲಕ ಒತ್ತಡ ಹೇರಲು ಪ್ರಯತ್ನಿಸಲಾಗಿದೆ ಎಂದು ಉಮೇಶ್ ಆರೋಪಿಸಿದರು.  

"ನಾನು ಕಾನೂನುಬದ್ಧವಾಗಿ ಆರ್ಟಿಐ ಅರ್ಜಿ ಸಲ್ಲಿಸಿದ್ದೇನೆ. ಸಂಬಂಧಪಟ್ಟ ಇಲಾಖೆ ಉತ್ತರ ನೀಡಬೇಕು. ಯಾವುದೇ ಕಾರಣಕ್ಕೂ ಅರ್ಜಿಯನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆ. ಅದರ ಮರುದಿನವೇ ನಮ್ಮ ವಿರುದ್ಧ ಆಧಾರರಹಿತ ಆರೋಪಗಳು ಪ್ರಾರಂಭವಾಗಿವೆ," ಎಂದು ಅವರು ಹೇಳಿದರು.  

ತಮ್ಮ ವಿರುದ್ಧ ಆರೋಪ ಮಾಡಿರುವವರ ಕುರಿತು ಆಡಿಯೋ ಹಾಗೂ ವಿಡಿಯೊ ದಾಖಲೆಗಳು ತಮ್ಮ ಬಳಿ ಇದ್ದು, ಅವುಗಳನ್ನು ಸಂಬಂಧಪಟ್ಟವರಿಗೆ ಸಲ್ಲಿಸಲಾಗಿದೆ ಎಂದ ಅವರು, "ಅಗತ್ಯವಿದ್ದರೆ ಪೊಲೀಸ್ ಇಲಾಖೆಗೆ ದೂರು ನೀಡಿ ತನಿಖೆಗೆ ಒತ್ತಾಯಿಸುತ್ತೇವೆ," ಎಂದು ಎಚ್ಚರಿಸಿದರು.  

"ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸಲಾಗುವುದು. ಆರ್ಟಿಐ ಮೂಲಕ ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಮುಂದುವರಿಸಲಾಗುವುದು," ಎಂದು ಉಮೇಶ್ ಆಲಮೇಲಕರ ತಿಳಿಸಿದರು.