ಕೂಡಲೇ ರೈತರಿಗೆ ಹಕ್ಕು ಪತ್ರ ಕೋಡದಿದ್ದರೆ ಆಗಸ್ಟ್‌ 10ರಿಂದ ಉಗ್ರ ಹೋರಾಟದ ಎಚ್ಚರಿಕೆ

ಕೂಡಲೇ ರೈತರಿಗೆ ಹಕ್ಕು ಪತ್ರ ಕೋಡದಿದ್ದರೆ ಆಗಸ್ಟ್‌ 10ರಿಂದ ಉಗ್ರ ಹೋರಾಟದ ಎಚ್ಚರಿಕೆ  Warning of an intense agitation starting August 10 if title deeds are not issued to farmers immediat

ಹೊಸಪೇಟೆ 01: ತಾಲ್ಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ದಣಾಯಕನಕೆರೆ, ನಂದಿಬಂಡಿ ಹಾಗೂ ನಾಗಲಾಪುರ ಕಂದಾಯ ಗ್ರಾಮಗಳ ರೈತರು ತುಂಗಭದ್ರಾ ಯೋಜನೆಯಿಂದ ಸ್ಥಳಾಂತರಗೊಂಡು ಸರ್ಕಾರ ತೋರಿಸಿದ ಜಾಗದಲ್ಲಿ ಕಳೆದ 73 ವರ್ಷಗಳಿಂದ ಕೃಷಿ ಮಾಡುತ್ತಿದ್ದರೂ ಇನ್ನೂ ಹಕ್ಕುಪತ್ರ (ಪಹಣಿ/ಮಾಲೀಕತ್ವ ದಾಖಲೆ) ದೊರೆತಿಲ್ಲ ಎಂದು ಆರೋಪಿಸಿದ್ದಾರೆ.  

ಸರ್ಕಾರ ಪುನರ್ವಸತಿ ವೇಳೆ ನೀಡಿದ ಜಮೀನಿನಲ್ಲಿ ಹಲವು ದಶಕಗಳಿಂದ ಸಾಗುವಳಿ ನಡೆಸುತ್ತಿದ್ದರೂ, ಕೆಲವರಿಗೆ ಮಾತ್ರ ಹಕ್ಕುಪತ್ರ ದೊರೆತಿದ್ದು, ಇನ್ನೂ ಅನೇಕ ರೈತರು ದಾಖಲೆಗಳಿಂದ ವಂಚಿತರಾಗಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.  

ಪ್ರಸ್ತುತ ಈ ಜಮೀನುಗಳು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ 3 ಕಿ.ಮೀ. ಅಂತರದಲ್ಲಿವೆ ಎಂಬ ಕಾರಣ ನೀಡಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ಕಚೇರಿಯಿಂದ ತಿಳಿಸಲಾಗುತ್ತಿದೆ.

ಆದರೆ, ರೈತರನ್ನು ಇಲ್ಲಿ ಪುನರ್ವಸತಿ ಮಾಡಿದ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಗ್ರಾಮ ಪಂಚಾಯಿತಿಯೇ ಇರಲಿಲ್ಲ; ನಂತರ 2019ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಿದೆ. ಈ ಕಾರಣವನ್ನು ಮುಂದಿಟ್ಟು ಹಕ್ಕುಪತ್ರ ನಿರಾಕರಿಸುವುದು ಸರಿಯಲ್ಲ ಎಂದು ರೈತರು ವಾದಿಸಿದ್ದಾರೆ.  

ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದ್ದು, ಸರ್ಕಾರಕ್ಕೆ ವರದಿ ಕಳುಹಿಸಿದ್ದರೆ ಅದರ ಪ್ರತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಆಗಸ್ಟ್‌ 10ರಂದು ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.  

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಗೋಣಿಬಸಪ್ಪ, ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಕೆ. ಯಮನೂರ​‍್ಪ, ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ್, ಗೌರವ ಅಧ್ಯಕ್ಷ ಹುಸೇನ್ ಸಾಬ್, ಹುಚ್ಚ ಸಾಬ್ ಇಬ್ರಾಹಿಂ ಸಾಹೇಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.