ಡಬ್ಲ್ಯುಟಿಸಿ: ತಂಡಗಳ ಸಮಗ್ರ ಯತ್ನದ ಬಗ್ಗೆ ಪ್ರತಿಪಾದಿಸಿದ ಬಿಸಿಸಿಐ

ನವದೆಹಲಿ, ಏ 16 ,ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕಳೆದ ವರ್ಷ ಆಗಸ್ಟ್ 1 ರಿಂದ ಆಶಸ್ ಸರಣಿಯೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಆವೃತ್ತಿಯನ್ನು ಪ್ರಾರಂಭಿಸಿದ್ದು,  ಇದರ ಫೈನಲ್ ಪಂದ್ಯವನ್ನು ಜೂನ್ 2021 ರಲ್ಲಿ ಲಾರ್ಡ್ಸ್‌ನಲ್ಲಿ ಆಡಲು ಯೋಜನೆ ರೂಪಿಸಿತ್ತು. ಆದರೆ ಕೊರೊನಾ ವೈರಸ್ ಏಕಾಏಕಿ ಕ್ರೀಡಾ ಜಗತ್ತನ್ನು ಸ್ಥಗಿತಗೊಳಿಸಿದೆ. ಜತೆಗೆ  ಎಲ್ಲ ಪ್ರವಾಸಗಳನ್ನು ಅಮಾನತುಗೊಳಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಹೀಗಾಗಿ ಚಾಂಪಿಯನ್‌ಷಿಪ್‌ನ ವೇಳಾಪಟ್ಟಿಯನ್ನು ಸರಿದೂಗಿಸಲು ಮತ್ತೆ ಕೆಲಸ ಮಾಡಬೇಕಾಗಿರುವುದರಿಂದ ಅಂತಾರಾಷ್ಟ್ರೀಯ ಸಂಸ್ಥೆ ಈಗ ಈ ವಿಷಯದ ಬಗ್ಗೆ ಚಿಂತಿಸುತ್ತಿದೆ.ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಐಸಿಸಿ ಅಧಿಕಾರಿಯೊಬ್ಬರು, ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಕೋವಿಡ್-19 ಪರಿಣಾಮದಿಂದಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲವಾದರೂ, ಪರ್ಯಾಯ ಆಯ್ಕೆಗಳನ್ನು ಪರಿಶೋಧಿಸಲಾಗುತ್ತಿದ್ದು, ಮೊದಲ ಆವೃತ್ತಿಯ ವೇಳಾಪಟ್ಟಿಯಲ್ಲಿ ಪುನಃ ಕೆಲಸ ಮಾಡುವ ಅಗತ್ಯವಿದ್ದಲ್ಲಿ ಅದನ್ನು ಜಾರಿಗೆ ತರಬಹುದಾಗಿದೆ, ಎಂದು ಹೇಳಿದ್ದಾರೆ. ಈ  ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಅಧಿಕಾರಿಯೊಬ್ಬರು, ಈ ತೊಂದರೆಗೊಳಗಾದ ಕಾಲದಲ್ಲಿ ಸರಿಯಾದ ಹೆಜ್ಜೆ ಇಡುವುದನ್ನು ಖಚಿತಪಡಿಸಿಕೊಳ್ಳಲು ಐಸಿಸಿಯಿಂದ ಮಾತ್ರವಲ್ಲದೆ ಅದರ ಎಲ್ಲ ಸದಸ್ಯರಿಂದಲೂ ಸಮಗ್ರ ತಂಡದ ಪ್ರಯತ್ನದ ಅಗತ್ಯವಿದೆ, ಎಂದು ಹೇಳಿದ್ದಾರೆ.