ಪಕ್ಷಾಂತರಿಗಳಿಗೆ ರಾಜ್ಯದಲ್ಲೂ ಮತದಾರರಿಂದ ತಕ್ಕ ಪಾಠ: ಸಿದ್ದರಾಮಯ್ಯ

ಬೆಂಗಳೂರು, ನ.11 :      ಜನರು ಪಕ್ಷಾಂತರಿಗಳನ್ನು ಸಹಿಸುವುದಿಲ್ಲ, ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ  ಕಲಿಸುತ್ತಾರೆ. ಈಗಾಗಲೇ, ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಇದು  ಸಾಬೀತಾಗಿದೆ. ಅದೇ ರೀತಿ ರಾಜ್ಯದ ಉಪ ಚುನಾವಣೆಯಲ್ಲಿಯೂ ಪಕ್ಷಾಂತರಿಗಳಿಗೆ ಜನ ಪಾಠ ಕಲಿಸಬೇಕೆಂದು ಕಾಯುತ್ತಿದ್ದಾರೆ  ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಬೆಂಗಳೂರಿನ ಪುರಭವನದ ಮುಂಭಾಗ ಕೆಪಿಸಿಸಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ  ಜನವಿರೋಧಿ ನೀತಿಗಳಿಂದ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 12  ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದರು. 

ಮುಖ್ಯಮಂತ್ರಿ ಬಿ.ಎಸ್.  ಯಡಿಯೂರಪ್ಪ ಅವರು ಪ್ರತಿ ದಿನ ಜಾಹೀರಾತು ನೀಡುತ್ತಿದ್ದಾರೆ. ಅದರಲ್ಲಿ ಛಲಗಾರ, ಜನ ನಾಯಕ  ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಯಡಿಯೂರಪ್ಪ ಅವರು ಹಿಂಬಾಗಿಲಿನಿಂದ ಬಂದು, ನಮ್ಮ  ಶಾಸಕರನ್ನು ದುಡ್ಡು ನೀಡಿ ಖರೀದಿಸಿದ್ದಾರೆ ಎಂದು ದೂರಿದರು. 

ಕೇಂದ್ರದಲ್ಲಿ ಸರಿಯಾದ ಆರ್ಥಿಕ ತಜ್ಞರಿಲ್ಲ, ಆರ್ಥಿಕ ನೀತಿಗಳು ಸರಿಯಾಗಿಲ್ಲ. ಬಡವರ ಕಷ್ಟಕ್ಕೆ ಕೇಂದ್ರ ಸರ್ಕಾರ  ಸ್ಪಂದಿಸಿಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ  ಏನೂ  ಗೊತ್ತಿಲ್ಲ. ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ ಎಂದು  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳು ಜನ ವಿರೋಧಿಗಳಾಗಿದ್ದು, ಪ್ರತಿಯೊಬ್ಬರೂ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾಗಿಯೇ, ಜನಪರ ನಾವು ಹೋರಾಟ ರೂಪಿಸಿದ್ದೇವೆ ಎಂದರು. 

ದೇಶದಲ್ಲಿ ಉದ್ಯಮಗಳು ಮುಚ್ಚುತ್ತಿವೆ, ಕೈಗಾರಿಕೆಗಳು ಉತ್ಪಾದನೆ ನಿಲ್ಲಿಸಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರ್ಲಕ್ಷ್ಯದ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ವಿರೋಧಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು. 

ರಾಜ್ಯಸಭಾ ಸದಸ್ಯ ಬಿ.ಕೆ.ಹರಿ ಪ್ರಸಾದ್ ಮಾತನಾಡಿ, ಆರ್ ಸಿಇಪಿ ಸೇರಿದಂತೆ ಅನೇಕ ನೀತಿಗಳು ಜಾರಿಯಾದರೆ, ಗ್ರಾಮೀಣ ಜನರು ಬದುಕು ಇನ್ನಷ್ಟು ದುಸ್ತರವಾಗಲಿದೆ. ಹಾಗಾಗಿ, ನಾವು ಜಾಗೃತರಾಗಬೇಕು ಎಂದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರಾದ ರಾಮಲಿಂಗರೆಡ್ಡಿ, ಉಮಾಶ್ರೀ, ರಾಣಿ ಸತೀಶ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಧ್ರುವ ನಾರಾಯಣ, ಕಾಂಗ್ರೆಸ್ ನಾಯಕರಾದ ವಿ.ಆರ್.ಸುದರ್ಶನ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.