ಹಂಸಭಾವಿಯಲ್ಲಿ ವಾಸವಿರುವ ಅಲೆಮಾರಿ ಸಿಂಧೋಳು ಸಮುದಾಯಕ್ಕೆ ಭೇಟಿ

ಹಂಸಭಾವಿಯಲ್ಲಿ ವಾಸವಿರುವ ಅಲೆಮಾರಿ ಸಿಂಧೋಳು ಸಮುದಾಯಕ್ಕೆ ಭೇಟಿ Visit to the nomadic Sindhol community living in Hansabhavi

ಹಂಸಭಾವಿಯಲ್ಲಿ ವಾಸವಿರುವ ಅಲೆಮಾರಿ ಸಿಂಧೋಳು ಸಮುದಾಯಕ್ಕೆ ಭೇಟಿ 

ಹಾವೇರಿ 06 : ಕಾನೂನಾತ್ಮಕವಾಗಿ, ಸಂವಿದಾನಾತ್ಮಕವಾಗಿ  ಅಲೆಮಾರಿ, ಅರೇ ಅಲೆಮಾರಿ ಜನರಿಗೆ  ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ  ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿ ಅವರು ಹೇಳಿದರು.  ಬ್ಯಾಡಗಿ ತಾಲೂಕಿನ ಸರಹದ್ದಿನಲ್ಲಿರುವ ಹಿರಂಜಿ ಗ್ರಾಮ ಪಂಚಾಯತ್ ವ್ಯಾಪ್ತಿಯ  ಹಂಸಬಾವಿಯ ಸರ್ವೆ ನಂ.105 ರಲ್ಲಿ ವಾಸವಿರುವ ಅಲೆಮಾರಿ ಸಿಂಧೋಳು ಸಮುದಾಯಕ್ಕೆ ಭೇಟಿ  ಜನರ ಸಮಸ್ಯೆಗಳನ್ನು ಆಲಿಸಿ ಬಳಿಕ  ಮಾತನಾಡಿದ ಅವರು, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಿ, ಯಾವುದೇ ಮಹಿಳೆ ಕಚೇರಿಗೆ ಬಂದರೆ ಅವರಿಗೆ ಸರಿಯಾಗಿ ಸ್ಪಂದಿಸಿ ಅವರ ಸಮಸ್ಯೆಗಳನ್ನು ಆಲಿಸಿ ತಾಲೂಕಿನಲ್ಲಿ ಯಾರೆಲ್ಲ ಅಧಿಕಾರಿಗಳು ಕರ್ತವ್ಯದಲ್ಲಿದ್ದೀರಾ ನೀವೆಲ್ಲರೂ ನಿಮ್ಮ ಕೆಲಸವನ್ನು ಜವಾಬ್ದಾರಿಯಿಂದ ಮಾಡಿ. ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ತಾಲೂಕಿನಲ್ಲಿ ಸರಿಯಾಗಿ ಕೆಲಸ ಮಾಡದೇ ಇರೋ  ಅಧಿಕಾರಿಗಳಿಗೆ ನೋಟಿಸ ನೀಡಿ, ಅವರ ವಿರುದ್ದ ಕ್ರಮ ಜರುಗಿಸಿ ಎಂದು ಬ್ಯಾಡಗಿ ತಹಸೀಲ್ದಾರ್ ಫಿರೋಜ್ ಸೋಮನಕಟ್ಟಿ  ಅವರಿಗೆ ಸೂಚನೆ ನೀಡಿದರು.  ಒಂದು ವೇಳೆ ನಿಮ್ಮಿಂದ ಆಗದೆ ಇದ್ದಲ್ಲಿ ನಾನೆ ಖುದ್ದಾಗಿ ಸರ್ಕಾರಕ್ಕೆ ಇಲ್ಲಿನ ಅವ್ಯವಸ್ಥೆ ಕುರಿತು ವರದಿ ಸಲ್ಲಿಸುತ್ತೇನೆ ಇದರಲ್ಲಿ ಯಾವುದೇ ಮುಲಾಜೇ ಇಲ್ಲ ಎಂದರು.  ಸಿಂಧೋಳು ಸಮುದಾಯದಲ್ಲಿ ವಾಸವಿರುವ ಅಲೆಮಾರಿ ಜನರಿಗೆ  ಸರಿಯಾಗಿ ಶುದ್ಧ ಕುಡಿಯುವ ನೀರಿಲ್ಲ, ಚರಂಡಿ ಅಂತೂ ಮೊದಲೇ ಇಲ್ಲ, ಇವರಿಗಳು ವಾಸಿಸುವುದಕ್ಕೆ ಮನೆ ಇಲ್ಲ, ಮಳೆಯಿಂದ ಇಲ್ಲಿ ತಿರಗಾಡುವುದಕ್ಕೂ ಆಗುತ್ತಿಲ್ಲ ಅಷ್ಟು ಶೋಚನಿಯ ಸ್ಥಿತಿಯಲ್ಲಿ ಇವರುಗಳು ವಾಸಿಸುತ್ತಿದ್ದಾರೆ. ನೀವೆಲ್ಲರೂ ಈ ಕಡೆಗೆ ಗಮನ ಹರೆಸಿಲ್ಲ, ಸರಕಾರದ ಉನ್ನತ ಮಟ್ಟದ ಹುದ್ದೆಯಲ್ಲಿರುವ ನೀವುಗಳು ಇಂತಹ ಜನರನ್ನು ಮಕ್ಕಳಂತೆ ಭಾವಿಸಿ ಅವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳ್ಳನ್ನಾದರೂ ಕಲ್ಪಿಸಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಶಾಶ್ವತ ಸೂರು ಒದಗಿಸಿ:   ನಿಮಗೆ ಶಾಶ್ವತ ಸೂರು ಒದಗಿಸಲು ದುಳಿಕೊಪ್ಪ ಕ್ರಾಸ್ ನಲ್ಲಿರುವ ಸರ್ಕಾರ ಜಾಗ ಗೊತ್ತುಪಡಿಸಿದೆ ಅದಕ್ಕೆ ನಿಮ್ಮ ಸಹಕಾರಬೇಕು  ನೀವು ಹೇಳಿದ ಸ್ಥಳದಲ್ಲೇ ಮನೆ ನೀಡಬೇಕು ಎಂದಾದರೆ ಅದು ಕಷ್ಟ ಸಾಧ್ಯ. ನಿಮಗೆ ಮನೆ ನೀಡುತ್ತೇವೆ ನೀವು ಅಲ್ಲಿ ಹೋಗಿ ವಾಸಿಸಲು ಸಿದ್ದರಾಗಿ ಎಂದು ತಿಳಿಸದರು.  ಸಮುದಾಯದ ಗರ್ಭಿಣಿ ಮಹಿಳೆಯರಿಗೆ ಮಾತೃವಂದನ ನೊಂದಣಿ ಮಾಡಿಲ್ಲ, ಅವರುಗಳಿಗೆ ಲಸಿಕೆ ಹಾಕಿಸಿಲ್ಲ,  ವಿಧವಾವೇತನ ಸೌಲಭ್ಯ ನೀಡಿಲ್ಲ, ಸರ್ಕಾರ ಜಾರಿಗೆ ತಂದಿರುವ ಸಿಂಗಲ್ ಪೇರೆಂಟ್ ಪ್ರಾಯೋಜಕತ್ವ ಯೋಜನೆಯು ಈ ಸಮುದಾಯದ ಹೆಣ್ಣು ಮಕ್ಕಳಿಗೆ ಮರೀಚಕೆಯಾಗಿದೆ. ಪ್ರಾಯೋಜಕತ್ವ ಯೋಜನೆಯ ಸೌಲಭ್ಯವನ್ನು 18 ವರ್ಷದೊಳಗಿನ ಮಕ್ಕಳನ್ನು ಹೊಂದಿರುವ  ಸಿಂಗಲ್ ಪೇರೆಂಟ್ ಮಹಿಳೆಗೆ ಒದಗಿಸಿದ್ದರೆ ಸರ್ಕಾರದಿಂದ ಅವರಿಗೆ ಪ್ರತಿ ತಿಂಗಳು  ರೂ. 4000-00  ಸಹಾಯಧನ ಬರುತ್ತಿತ್ತು ಇದು ಇವರ ಆರ್ಥಿಕತೆಗೆ ಸಹಾಯವಾಗುತ್ತಿತ್ತು ಎಂದರು. ಹಾಗೆಯೇ ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಅಷ್ಟು ಸೌಲಭ್ಯಗಳನ್ನು ಒದಗಿಸಿ  ಎಂದು ಅಧಿಕಾರಿಗಳಿಗೆ ಖಡಕ  ಸೂಚನೆ ನೀಡಿದರು ಮತ್ತು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಾಳೆ  ಒಳಗಾಗಿ ವರದಿ ನೀಡುವಂತೆ ಸೂಚಿಸಿದರು.  ಸಿಂಧೋಳು ಸಮುದಾಯದ ಅಲೆಮಾರಿ ಜನರು ಅಧ್ಯಕ್ಷರ ಎದುರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ಭಾಗಕ್ಕೆ ಯಾವ ಅಧಿಕಾರಿಗಳು ಬರುವುದಿಲ್ಲ ನಮಗೆ ಯಾವುದೇ ಜಾತಿ ಪ್ರಮಾಣ ಪತ್ರ ಇಲ್ಲ, ಆಧಾರ ಕಾರ್ಡ್‌ ಇಲ್ಲ, ರೇಷನ್ ಕಾರ್ಡ್‌ ಇಲ್ಲ, ಇವುಗಳನ್ನು ಮಾಡಿಸಲು ನಾವು ಸಂಬಂಧಪಟ್ಟ ಕಚೇರಿಗೆ ಅಲೆದು ಸಾಕಾಯಿತು ನಮಗೆ ಆಧಾರ ಕಾರ್ಡ್‌ ಮಾಡಿಸಲು ರೂ. 9,000-00 ಗಳ ಲಂಚ ಕೇಳುತ್ತಾರೆ, ವಿಧವಾ ವೇತನ ಮಾಡಿಸಲು ರೂ. 20,000-00 ಗಳ ಲಂಚ ಕೇಳುತ್ತಾರೆ ಇಷ್ಟು ಹಣ ನಾವು ಎಲ್ಲಿಂದ ತರೋಣ, ಒಂದು ಹೊತ್ತು ಊಟಕ್ಕೆ ನಾವು ದಿನಂಪ್ರತಿ  ದುಡೀಬೇಕು. ಆಧಾರ್ ಕಾರ್ಡ್‌ ಇಲ್ಲದೆ ಇರುವುದರಿಂದ ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಮಗೆ ಶಾಶ್ವತ ಸೂರು, ಶುದ್ಧ ಕುಡಿಯುವ ನೀರು ನೀಡಿ ಬೋರ್ ವೆಲ್ ಹಾಕಿಸಿಕೊಡಿ ಎಂದು ಸಾಕಷ್ಟು ಬಾರಿ ಮನವಿ ಕೊಟ್ಟರು ನಮಗೆ ಯಾವುದೇ ಅಧಿಕಾರಿ ಸ್ಪಂದನೆ ಮಾಡುತ್ತಿಲ್ಲ ನಾವೇ ಸ್ವತಃ ಬೋರ್ವೆಲ್ ಹಾಕಿಸಿಕೊಂಡಿದ್ದೇವೆ ಆದರೆ ಆ ನೀರು ಕುಡಿಯಲು ಯೋಗ್ಯವಿಲ್ಲ  2 ಕಿ ಮೀ ದೂರದಿಂದ ನೀರು ತರುತ್ತೇವೆ ಇದಕ್ಕೆ ಕೂಡಲೇ ವ್ಯವಸ್ಥೆ ಮಾಡಿಕೊಡಿ ಎಂದು ಅಂಗಲಾಚಿದರು, ಜಾತಿ ಪ್ರಮಾಣ ಪತ್ರ ಮಾಡಿಸಿಕೊಡಿ, ಆಧಾರ್ ಕಾರ್ಡ್‌ ಮಾಡಿಸಿಕೊಡಿ ಆಧಾರ್ ಕಾರ್ಡ್‌ ಇಲ್ಲದೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ನಮಗೆ ಆಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.  ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.