ಇರಾಕ್ನಲ್ಲಿ ಹಿಂಸಾತ್ಮಕ ಪ್ರತಿಭಟನೆ: ಸಾವನ್ನಪ್ಪಿದವರ ಸಂಖ್ಯೆ 65ಕ್ಕೇರಿಕೆ; 1936 ಮಂದಿಗೆ ಗಾಯ

ಮಾಸ್ಕೋ, ಅ 5:   ಇರಾಕ್ನಲ್ಲಿ ಮಂಗಳವಾರದಿಂದ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಬಲಿಯಾದವರ ಸಂಖ್ಯೆ 65ಕ್ಕೇರಿದೆ ಎಂದು ಭದ್ರತಾ ಪಡೆಗಳ ಹೇಳಿಕೆಯನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ಅರೇಬಿಯಾ ವರದಿ ಮಾಡಿದೆ. 

ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶುಕ್ರವಾರ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದೆ. ಗಾಯಗೊಂಡವರ ಸಂಖ್ಯೆ 1936ಕ್ಕೇರಿದೆ  ಎಂದು ಇರಾಕ್ನ ಮಾನವ ಹಕ್ಕುಗಳ ನಿಗಾ ಸಂಸ್ಥೆಯ ಮುಖ್ಯಸ್ಥ ಮುಸ್ತಫಾ ಸಾದುನ್ ತಿಳಿಸಿದ್ದಾರೆ.

ದೇಶದಲ್ಲಿ ಭಷ್ಟ್ರಾಚಾರ, ನಿರುದ್ಯೋಗ ಸಮಸ್ಯೆ ನಿವಾರಿಸಬೇಕು, ಯುವಕರಿಗೆ ಉದ್ಯೋಗ ನೀಡಬೇಕು, ಸಾರ್ವಜನಿಕರಿಗೆ ಸಾರ್ವಜನಿಕ ಸೇವೆಯನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ದೇಶದ ಮೂಲೆ ಮೂಲೆಗಳಲ್ಲಿ ಮಂಗಳವಾರದಿಂದ ಜನರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸಿದ್ದು, ಭದ್ರತಾ ಪಡೆ ಅಶ್ರುವಾಯು, ಜಲಫಿರಂಗಿ ಬಳಸಿ ಪ್ರತಿಭಟನಕಾರರನ್ನು ಚದುರಿಸಲು ಪ್ರಯತ್ನಿಸುತ್ತಿದೆ.