ಸರ್ಕಾರಿ ಜಾಗ ಅತಿಕ್ರಮಣ ತೆರವುಗೊಳಿಸಲು ಗ್ರಾಮಸ್ಥರ ಪ್ರತಿಭಟನೆ

ಸರ್ಕಾರಿ ಜಾಗ ಅತಿಕ್ರಮಣ ತೆರವುಗೊಳಿಸಲು ಗ್ರಾಮಸ್ಥರ ಪ್ರತಿಭಟನೆ  Villagers protest to clear encroachment on government land


ಲೋಕದರ್ಶನ ವರದಿ 

ಜಮಖಂಡಿ 20 : ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಸರ್ಕಾರಿ (ಗಾಂವಠಣ) ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ಅವುಗಳನ್ನು ಕೂಡಲೇ ತೆರವು ಗೊಳಿಸಬೇಕು, ಸರ್ಕಾರಿ ಸ್ಥಳವನ್ನು ಕಾಪಾಡಬೇಕು ಎಂದು ತಾಲೂಕು ಪಂಚಾಯತ ಕಚೇರಿ ಎದುರು ತೊದಲಬಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮುಖಂಡ ರಾಮಪ್ಪ ಕರಜಗಿ ಮಾತನಾಡಿ, ತೊದಲಬಾಗಿ ಪಿಡಿಓ ಸವಿತಾ ಚಿನಗುಂಡಿ ಹಾಗೂ ಕಾರ್ಯದರ್ಶಿಗಳಿಗೆ ಈ ವಿಷಯಗಳು ಗೊತ್ತಿದ್ದರೂ ಖಾಸಗಿ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ, ತಾಲ್ಲೂಕು ಪಂಚಾಯತ ಇಓ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತೆರವು ಅಕ್ರಮ ನಿರ್ಮಾಣದ ಮನೆಗಳನ್ನು ತೆರವುಗೊಳಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 

ಬಸಣ್ಣ ಜಮಖಂಡಿ ಮಾತನಾಡಿ, ಬಿದರಿ ಗ್ರಾಮದ ಪುನರ್ವಸತಿ ಕೇಂದ್ರಗಳು ತೊದಲಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತವೆ, ಶಿಕ್ಷಕರ ವಸತಿ ಗೃಹ ಕಟ್ಟಡಗಳಿದ್ದು ಅವುಗಳನ್ನು ಖಾಸಗಿ ವ್ಯಕ್ತಿಗಳು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ, ಒಂದು ಪಹಣಿ ನೀಡಲು ಮೂರು ತಿಂಗಳು ಸಮಯ ತೆಗೆದುಕೊಳುತ್ತಾರೆ ಅವರನ್ನು ಕೂಡಲೇ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.  ಇದೇ ಸಂದರ್ಭದಲ್ಲಿ ಶಿದರಾಯ ಸಣಸಿದ್ದ, ಗುರಲಿಂಗಪ್ಪ ಸಾಯಗೊಂಡ, ಸಿದ್ದಪ್ಪ ಬೋಸ್ಲೆ, ಅಪ್ಪಾಶಿ ಯಾದವಾಡ ಸೇರಿದಂತೆ ಇತರರು ಇದ್ದರು.