ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ  Villagers protest demanding repair of dilapidated road

ತಾಳಿಕೋಟಿ : ತಾಲೂಕಿನ ಕಲಕೇರಿ ಗ್ರಾಮದಿಂದ ಬಿಂಜಲಭಾವಿ ಮಾರ್ಗವಾಗಿ ಕೆಸರಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಂಪೂರ್ಣ ಹದಗೆಟ್ಟು ಹಾಳಾಗಿ ಹೋಗಿದ್ದು ಅದನ್ನು ಆದಷ್ಟು ಬೇಗ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿ ಆ ಭಾಗದ ಗ್ರಾಮಸ್ಥರು ಕೈಯಲ್ಲಿ ಫ್ಲೇಕ್ಸ್‌ ಗಳನ್ನು ಹಿಡಿದುಕೊಂಡು ಹದಗೆಟ್ಟ ರಸ್ತೆಯ ಮೇಲೆಯೇ ಬುಧವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘದ ತಾಳಿಕೋಟಿ ತಾಲೂಕ ಅಧ್ಯಕ್ಷ ಅಶೋಕಗೌಡ ಪಾಟೀಲ ಅವರು ಮಾತನಾಡಿ ಕಳೆದ 20 ವರ್ಷಗಳಿಂದ ಈ ರಸ್ತೆ ಹಾಳಾಗಿ ಹೋಗಿದ್ದು ಇಲ್ಲಿಯವರೆಗೆ ಬಂದಿರುವ ಯಾವ ಜನಪ್ರತಿನಿಧಿಗಳು ಇದನ್ನು ಸುಧಾರಿಸಲು ಕ್ರಮ ವಹಿಸಿಲ್ಲ.

ಈಗ ಮಳೆಗಾಲ ಆರಂಭವಾಗಿರುವುದರಿಂದ ಇಲ್ಲಿಂದ ಕಲಿಕೇರಿ ಅಥವಾ ತಾಳಿಕೋಟಿಗೆ ಸಂಚರಿಸಲು ಗ್ರಾಮಸ್ಥರು ತೀವ್ರ ತೊಂದರೆಯನ್ನು ಅನುಭವಿಸುವಂಥಾಗಿದೆ. ಪ್ರತಿ ಬಾರಿಯೂ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಇದರ ಕುರಿತು ತಿಳಿಸಿದರೂ ಯಾವುದೇ ವಿಶೇಷ ಆಸಕ್ತಿ ವಹಿಸುವುದಿಲ್ಲ ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಾರೆ ಹೊರತು ಕೆಲಸ ಮಾಡುವುದಿಲ್ಲ. ಈಗ ನಮ್ಮ ಸಹನೆಯ ಕಟ್ಟೆ ಒಡೆದಿದೆ ಇದನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಡಿಸದೆ ಹೋದಲ್ಲಿ ಈ ಭಾಗದ ಎಲ್ಲ ಗ್ರಾಮಸ್ಥರು, ರೈತರು ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಅದಕ್ಕಿಂತ ಮುಂಚೆ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕೆಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ವಿಜಯಕುಮಾರ ಉಕ್ಕಲಿ, ಮುದಕಣ್ಣ ಕರವಿನ, ಶ್ರೀಮಂತಗೌಡ ಮುದ್ನೂರ,ನಿಂಗು ಟೇಕಾಪುರ,ರಫೀಕ ಹಾಗೂ ಮೂರು ಗ್ರಾಮಗಳ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.