ಕುಡಿಯಲು ಶುದ್ಧ ನೀರಿಲ್ಲದೆ ಗೋಳಾಡುತ್ತಿರುವ ಕಲ್ಲದೇವನಹಳ್ಳಿ ಗ್ರಾಮಸ್ಥರು
Villagers of Kalladevanahalli lamenting the lack of clean drinking water
ತಾಳಿಕೋಟಿ 24: ಏಕೈಕ ನೀರಿನ ಮೂಲ ಒಂದೇ ಒಂದು ತೆರೆದ ಭಾವಿ ನೀರು ಕಲುಷಿತಗೊಂಡು, ಕುಡಿಯಲು ಶುದ್ಧ ನೀರಿಲ್ಲದೆ ಕಲ್ಲದೇವನಹಳ್ಳಿ ಗ್ರಾಮಸ್ಥರು ಗೋಳಾಡುವಂತಾಗಿದೆ.
ಹೌದು ಪಟ್ಟಣಕ್ಕೆ ಕೇವಲ 9 ಕಿ.ಮೀ ಅಂತರದಲ್ಲಿರುವ ಕಲ್ಲದೇವನಹಳ್ಳಿ ಎಂಬ ಪುಟ್ಟ ಗ್ರಾಮ. ಇದು ಮೂಕಿಹಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುತ್ತದೆ. ಐದು ನೂರು ಮನೆಗಳ ಇರುವ ಈ ಗ್ರಾಮಕ್ಕೆ ಕುಡಿಯಲು ಇರುವ ಏಕೈಕ ನೀರಿನ ಮೂಲ ಒಂದೇ ಒಂದು ಅದು ಇಲ್ಲಿರುವ ತೆರೆದ ಭಾವಿ, ಇಲ್ಲಿಯ ನೀರನ್ನು ಓವರ್ ಹೆಡ್ ಟ್ಯಾಂಕಿನಲ್ಲಿ ಸಂಗ್ರಹಿಸಿ ನೀರು ಗ್ರಾಮಸ್ಥರಿಗೆ ಪೂರೈಸಬೇಕು. ಗ್ರಾಮದಲ್ಲಿ ಜೆಜೆ ಎಂ ಕಾಮಗಾರಿ ಮುಗಿದಿದೆ ಆದರೆ ನೀರಿನ ಸಂಪರ್ಕ ಇಲ್ಲಿಯವರೆಗೂ ನೀಡದೇ ಇರುವುದರಿಂದ ಈ ಬಾವಿಯ ನೀರನ್ನೇ ಕುಡಿಯಬೇಕು. ತೆರೆದ ಭಾವಿಯ ನೀರು ಕುಡಿಯಲು ಯೋಗ್ಯವಾಗಬೇಕಾದರೆ ಭಾವಿ ಹಾಗೂ ಓವರ್ ಹೆಡ್ ಟ್ಯಾಂಕ್ ಮೇಲಿಂದ ಮೇಲೆ ಸ್ವಚ್ಛಗೊಳಿಸಬೇಕು. ಇಲ್ಲದಿದ್ದಲ್ಲಿ ಅದರಲ್ಲಿ ಕೆಟ್ಟ ಜೀವ ಜಂತಗಳು ಹುಟ್ಟಿಕೊಂಡು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದರ ಕುರಿತು ಜಿಲ್ಲಾ ಪಂಚಾಯತ ಅಧಿಕಾರಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆಗಳನ್ನು ಕೊಡುತ್ತಲೇ ಇರುತ್ತಾರೆ. ಆದರೆ ಏನು ಮಾಡುವುದು ನಮ್ಮ ವ್ಯವಸ್ಥೆಗೆ ತುಕ್ಕು ಹಿಡಿದಿದೆ ಮಾತ್ರವಲ್ಲ ಹಾಳಾಗಿಯೂ ಹೋಗಿದೆ. ಈಗ ಇಂಥಹ ಕೆಟ್ಟ ಪರಿಸ್ಥಿತಿ ಈ ಗ್ರಾಮದಲ್ಲಿ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರು ಹೇಳುವಂತೆ ಕಳೆದ ಆರು ತಿಂಗಳಿನಿಂದ ಈ ತೆರೆದ ಬಾವಿಯನ್ನು ಸ್ವಚ್ಛ ಮಾಡಿಲ್ಲ ಅದರಲ್ಲಿರುವ ನೀರನ್ನು ನೋಡಿದರೆ ವಾಕರಿಕೆ ಬರುತ್ತದೆ ಇಡೀ ಬಾವಿಯ ನೀರಲ್ಲಿ ಕಪ್ಪೆ ಜೊಂಡು ಹಾಗೂ ಕಸದ ರಾಶಿ ತುಂಬಿಕೊಂಡಿದೆ ಇದರಿಂದ ನೀರು ಎಲ್ಲಿದೆ ಎಂದು ಹುಡುಕಬೇಕಾಗುತ್ತದೆ. ಇದರ ಕುರಿತು ಗ್ರಾಪಂ ಸದಸ್ಯೆಯ ಪತಿ ಎಂ.ಬಿ.ಮುಜಾವರ ಅವರು ಸ್ವತ ತಾಲೂಕು ಪಂಚಾಯತ ಇಓ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾರೂ ಕ್ಯಾರೆ ಅನ್ನುತ್ತಿಲ್ಲ. ಈ ಸಮಸ್ಯೆಯನ್ನು ಶಾಸಕರ ಮುಂದೆಯೂ ತಂದಿದ್ದು ಶಾಸಕರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರೂ ಇಲ್ಲಿವರೆಗೆ ಅದನ್ನು ಪಾಲಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಮಲಿನಗೊಂಡ ನೀರನ್ನು ಕುಡಿದು ಗ್ರಾಮಸ್ಥರು, ಸಣ್ಣ ಸಣ್ಣ ಮಕ್ಕಳ ಆರೋಗ್ಯ ಅಸ್ತವ್ಯಸ್ತವಾಗುತ್ತಿದ್ದು ಪ್ರತಿದಿನ ಆಸ್ಪತ್ರೆಗೆ ಅಲಿಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗೋಳಾಡುತ್ತಾರೆ. ಆದರೆ ಇವರ ಗೋಳು ಕೇಳುವವರು ಯಾರು?, ತೆರೆದ ಬಾವಿಗಳ ಸುತ್ತಮುತ್ತ ಪರಿಸರ ಕೆಡದಂತೆ ನೋಡಿಕೊಳ್ಳಬೇಕು ಆದರೆ ಇಲ್ಲಿನ ಭಾವಿಯ ಹತ್ತಿರವೂ ಹೋಗಲಿಕ್ಕೂ ಸಾಧ್ಯವಿಲ್ಲ ಅಷ್ಟು ಮುಳ್ಳು ಕಂಟಿಗಳು ಬೆಳೆದುಕೊಂಡಿವೆ. ವಿಷಕಾರಿ ಹಾವುಗಳು ಹಾಗೂ ಕೆಲವೊಮ್ಮೆ ಪಕ್ಷಿಗಳು ಸತ್ತು ನೀರಿನಲ್ಲಿ ಬಿದ್ದಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಅದು ಎಂದೋ ಸ್ಥಗಿತಗೊಂಡು ತುಕ್ಕು ಹಿಡಿದಿದೆ. ಮನುಷ್ಯನಿಗೆ ಆರೋಗ್ಯವೇ ಅಮೂಲ್ಯವಾದದ್ದು ಅದು ಸರಿಯಾಗಿ ಇರಬೇಕಾದರೆ ಶುದ್ಧ ಕುಡಿಯುವ ನೀರಿನ ಅಗತ್ಯವಿದೆ ಇದನ್ನು ಅಧಿಕಾರಿಗಳು ತಿಳಿಯುವ ಅಗತ್ಯವಿದೆ. ಇಲ್ಲಿಯ ಗ್ರಾಮಸ್ಥರು ಈ ಗಂಭೀರ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸದೆ ಹೋದಲ್ಲಿ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕಾಗಿದೆ, ಇಲ್ಲದಿದ್ದಲ್ಲಿ ಇದು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ಗ್ರಾಮಸ್ಥರಾದ ಎಂ.ಬಿ.ಮುಜಾವರ, ರಾಜು ಇಂಗಳೇಶ್ವರ, ಈರಣ್ಣ ಇಂಗಳೇಶ್ವರ, ಮಲ್ಲಣ್ಣ ಮೇಲ್ದಾಪೂರ, ಶ್ರೀಶೈಲ ಕುಂಬಾರ, ನಿಂಗಣ್ಣ ನಡಕೂರ ನಾಗೇಶ ಇಂಗಳೇಶ್ವರ, ಪರಶುರಾಮ ವಾಲೀಕರ, ಸಚಿನ್ ಪಾಟೀಲ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 