ಪಾಂಡೇಗಾಂವ್‌-ಕಂಗನೋಳಿ ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

ಪಾಂಡೇಗಾಂವ್‌-ಕಂಗನೋಳಿ ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ  Villagers demand for repair of Pandegaon-Kanganoli road

ಸಂಬರಗಿ 15: ಗಡಿ ಭಾಗದ ಪಾಂಡೇಗಾಂವ್ ಮತ್ತು ಕಂಗನೋಳಿ ಗ್ರಾಮಗಳ ಮಧ್ಯೆ ಕಾರ್ಖಾನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಭಾರೀ ವಾಹನಗಳ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಮಾಜಿ ಸೈನಿಕ ಸಚಿನ್ ಪಾಟೀಲ, ರಾಜಾರಾಮ ಅಡವಳೆ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.  ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ ಅವರು, ಪಾಂಡೇಗಾಂವ್‌-ಕಂಗನೋಳಿ ಮಾರ್ಗದಲ್ಲಿ ಹಲವು ಕಾರ್ಖಾನೆಗಳಿದ್ದು, ಪ್ರತಿದಿನ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತಿವೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.  

ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಚಿಕಿತ್ಸೆಗಾಗಿ ಸಾಂಗ್ಲಿ ಮತ್ತು ಮಿರಜ್ ನಗರಗಳಿಗೆ ಇದೇ ಮಾರ್ಗವಾಗಿ ತೆರಳಬೇಕಾಗಿದ್ದು, ಹದಗೆಟ್ಟ ರಸ್ತೆಯಿಂದ ಅಪಾಯ ಎದುರಿಸುತ್ತಿದ್ದಾರೆ. ರಸ್ತೆಯಲ್ಲಿರುವ ದೊಡ್ಡ ಗುಂಡಿಗಳಿಂದಾಗಿ ಹಲವು ಅಪಘಾತಗಳು ಸಂಭವಿಸಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.  ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಥವಾ ಕಾರ್ಖಾನೆ ಆಡಳಿತವು ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿಯನ್ನು ತಕ್ಷಣ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.  

ಮನವಿಗೆ ಬಾಳು ಹಜಾರೆ, ಮಹಾದೇವ ಪಾಟೀಲ, ಶಿವಾಜಿ ಚೌಗುಲೆ, ಅಮಿತ್ ಕಾಂಬಳೆ, ಶಿವಾಜಿ ಜಾಧವ್, ಧನಾಜಿ ಜಾಧವ್, ರಾಜು ಚೌಗುಲೆ, ಸುರೇಶ್ ಚೌಗುಲೆ, ಅಜಿತ್ ಪಾಟೀಲ, ಸಂದೀಪ್ ಪಾಟೀಲ, ಸುಭಾಷ್ ಪಾಟೀಲ, ಪಂಡಿತ್ ಚೌಗುಲೆ ಸೇರಿದಂತೆ ಅನೇಕ ರೈತರು ಹಾಗೂ ಗ್ರಾಮಸ್ಥರು ಸಹಿ ಹಾಕಿದ್ದಾರೆ. ಮನವಿ ಪ್ರತಿಗಳನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಕಳುಹಿಸಲಾಗಿದೆ.  ಪಾಂಡೇಗಾಂವ್ನಿಂದ ಕಂಗನೋಳಿ ವರೆಗೆ ರಸ್ತೆ ಗುಂಡಿಗಳಿಂದ ಹದಗೆಟ್ಟಿದ್ದು, ತುರ್ತು ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.