ಲೋಕದರ್ಶನ ವರದಿ
ವಿಜಯಪುರ 04: ಬರಗಾಲ ಕಾಮಗಾರಿ ನಿರ್ವಹಣೆಗೆ ಯಾವುದೇ ನೆಪವೊಡ್ಡದೇ ಸಮರ್ಪಕವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿ ಎಂದು ಜಿಲ್ಲಾ ಉಸ್ತುವಾರಿಕಾರ್ಯದರ್ಶಿಗಳಾದ ಮೊಹ್ಮದ ಮೊಹಸೀನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಸಭಾಂಗಣದಲ್ಲಿಂದು ಬರ ಕುರಿತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬರ ನಿರ್ವಹಣೆ ಹಾಗೂ ಕುಡಿಯುವ ನೀರು ಪೂರೈಕೆಗೆ ಯಾವುದೇ ಅನುದಾನದ ಕೊರತೆ ಇಲ್ಲ. ಬರದಂತಹ ಕ್ಲೀಷ್ಟಕರ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಬರಗಾಲ ಕಾಮಗಾರಿಗಳನ್ನು ಕೈಗೊಳ್ಳಬೇಕು. ನೀರಿನ ಅವಶ್ಯಕತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಹೇಳಿದರು.
ಬರ ಕಾಮಗಾರಿ ಸೇರಿದಂತೆ ಕುಡಿಯುವ ನೀರಿನ ಪೂರೈಕೆಯ ಬಿಲ್ಲುಗಳನ್ನು ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳಬಾರದು. ತಾಲೂಕಾವಾರು ಟ್ಯಾಂಕರ್ಗಳಿಂದ ನೀರು ಪೂರೈಕೆಯ ಬಿಲ್ಲುಗಳನ್ನು ಪಾವತಿಸಬೇಕು. ಯಾವುದೇ ಬಿಲ್ ಪಾವತಿ ಬಾಕಿ ಉಳಿಸಿಕೊಂಡಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಬಿಲ್ಗಳನ್ನು 7 ದಿನಗಳೊಳಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಗ್ರಾಮ ಪಂಚಾಯತಿವಾರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿ ಬೊರವೆಲ್ಗಳ ಲಭ್ಯತೆ, ಬೊರವೆಲ್ಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಬೇಕು. ವಿಫಲವಾದ ಕೊಳವೆಗಳನ್ನು ಕ್ರಮಬದ್ಧವಾಗಿ ಮುಚ್ಚಿಸಲು ಕ್ರಮ ಕೈಗೊಂಡು ಅವಘಡಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ವಿಜಯಪುರ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ 15 ವಾರ್ಡಗಳಲ್ಲಿ ಅಮೃತ್ ಯೋಜನೆಯಡಿ 24/7 ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಈ ಪ್ರದೇಶದಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇಲ್ಲ. ಈ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಅಗತ್ಯವಿಲ್ಲ. ಉಳಿದಂತೆ ನೀರಿನ ಅವಶ್ಯಕತೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಹಾಗೂ ಕುಡಿಯಲು ಯೋಗ್ಯವಾದ ಹಳ್ಳದ ನೀರನ್ನು ಕುಡಿಯಲು ಮಾತ್ರ ಉಪಯೋಗಿಸಬೇಕು. ಹೊರತಾಗಿ ಬೆಳೆಗಳಿಗೆ ನೀರು ಎತ್ತುವಂತಿಲ್ಲ. ಈ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿ, ಕುಡಿಯಲು ಮಾತ್ರ ನೀರು ಪೂರೈಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಮೇವು ಬ್ಯಾಂಕ್ಗಳಿಂದ ದನಕರುಗಳಿಗಳಲ್ಲದೇ ಕುದುರೆ, ಟಾಂಗಾ ಮಾಲೀಕರಿಗೂ ಮೇವು ಒದಗಿಸಲು ಕ್ರಮ ಕೈಗೊಳ್ಳಬೇಕು, ಬರ ಪರಿಸ್ಥಿತಿ ಇರುವ ಹಿನ್ನಲೆಯಲ್ಲಿ ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಸೃಷ್ಟಿ ಮಾಡಿ ಜನರಿಗೆ ಉದ್ಯೋಗ ನೀಡಿ ನೆರವಾಗಬೇಕು. ವೇತನ ಬಾಕಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿಕೊಂಡು ಜನರ ನೆರವಿಗೆ ಧಾವಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮಾತನಾಡಿ, ವಸತಿ ಶಾಲೆಗಳ ನಿವೇಶನ, ಸ್ಮಶಾನ ಭೂಮಿ ಕುರಿತು ನ್ಯಾಯಾಲಯಗಳ ವ್ಯಾಜ್ಯಗಳನ್ನು 20 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹನಾಧಿಕಾರಿ ವಿಕಾಸ ಕಿಶೋರ ಸುರಳಕರ ಅವರು ಮಾತನಾಡಿ, ಬರಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳ ಮಧ್ಯೆ ಸಮನ್ವಯತೆ ಕೊರತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕು. ಜಿಪಿಎಸ್ ಡಾಟಾ ಇಲ್ಲದ ಕಡೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ವಸ್ತುಸ್ಥಿತಿ ಕುರಿತು ಪರಿಶೀಲನೆ ನಡೆಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಖಾಸಗಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಕುರಿತು ಇಲಾಖೆಯಿಂದ ಇರುವ ಮಾನದಂಡಗಳು, ನಿಯಮಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸೇರಿದಂತೆ ವಿವಿಧ ಇಲಾಖೆ, ವಿವಿಧ ನಿಗಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ಅಮರೇಶ ನಾಯಕ ಸೇರಿದಂತೆ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ಆಯಾ ತಾಲೂಕಾ ತಹಶೀಲ್ದಾರರು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.