ಶಾಲಾ- ಕಾಲೇಜುಗಳಲ್ಲಿ ವಿವಿಧ ಸಮಿತಿಗಳನ್ನು ರಚಿಸಿ- ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ

ಶಾಲಾ- ಕಾಲೇಜುಗಳಲ್ಲಿ ವಿವಿಧ ಸಮಿತಿಗಳನ್ನು ರಚಿಸಿ- ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ Various committees to be formed in schools and colleges - Deputy Commissioner Dr. Suresh B. Itnal

ಕೊಪ್ಪಳ  19 : ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯ ಹಾಗೂ ಮೆಡಿಕಲ್ ಮತ್ತು ಇಂಜೀನೀಯರಿಂಗ್ ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ ಕಮಿಟಿಗಳನ್ನು ರಚಿಸಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ಅವರಿಗೆ ತಿಳಿ ಹೇಳಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.ಅವರು ಬುಧವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕರೆದ ನಾರ್ಕೋ ಕೋ- ಆರ್ಡಿನೇಷನ್ ಸೆಂಟರ್ (ಓಅಓಖಆ) ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ತಿಳಿ ಹೇಳುವುದರ ಜೊತೆಗೆ ನಶಾ ಮುಕ್ತ ಅಭಿಯಾನದಂತಹ ಕಾರ್ಯಕ್ರಮಗಳ ಸಹಯೋಗದಲ್ಲಿ ಮಕ್ಕಳಿಗೆ ಮ್ಯಾರಥಾನ್ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಇದರಲ್ಲಿ ಹೆಚ್ಚಿನ ಮಕ್ಕಳು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. 

ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಯಲ್ಲಿ ಮಾದಕ ದ್ರವ್ಯ ಪತ್ತೆ ಹಚ್ಚುವ 50 ಕಿಟ್‌ಗಳನ್ನಾದರೂ ಎಲ್ಲಾ ಆಸ್ಪತ್ರೆಗಳಲ್ಲಿ ಇಡಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಅವುಗಳು ಇರುವಂತೆ ನೋಡಿಕೊಳ್ಳಿ. ಅಬಕಾರಿ ಇಲಾಖೆಯವರು ಇಲ್ಲಿಯವರೆಗೆ ಎಷ್ಟು ರೆಸಾರ್ಟ್‌ಗಳಿಗೆ ಭೇಟಿ ನೀಡಿದ್ದೀರಾ, ರೆಸಾರ್ಟ್‌ಗಳಲ್ಲಿ ಯಾವುದೇ ಮಾದಕ ವಸ್ತುಗಳು ಕಂಡು ಬಂದಲ್ಲಿ ತಕ್ಷಣವೇ ಅಂತಹ ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ. ಜಿಲ್ಲೆಯ ಎಲ್ಲಾ ರೆಸಾರ್ಟ್‌ಗಳಿಗೆ ಆಗಾಗ್ಗೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಬೇಕು ಎಂದರು.ಮಾದಕ ವಸ್ತುಗಳ ಸಾಗಾಟ, ಮಾರಾಟ ಮತ್ತು ಬಳಕೆಯ ಕುರಿತ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ. ಇಂತಹ ಯಾವುದೇ ಪ್ರಕರಣಗಳು ಕಂಡು ಬಂದರೆ ಪೊಲೀಸ್, ಅರಣ್ಯ ಇಲಾಖೆ, ಸಾರಿಗೆ, ಅಬಕಾರಿ ಹಾಗೂ ಇತರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕು.

ರೆಸಾರ್ಟ್‌, ಡಾಬಾಗಳು, ಹೊಟೇಲ್, ಸ್ಟೇ ಹೋಂಗಳಿಗೆ ಆಗಾಗ ಭೇಟಿ ನೀಡಿ ಪರೀಶೀಲನೆ ನಡೆಸುತ್ತಿರಬೇಕು. ಗಾಂಜಾವನ್ನು ಸಾಗುವಳಿ ಭೂಮಿಯ ಮಧ್ಯಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ ಎನ್ನುವ ದೂರುಗಳಿದ್ದು, ಈ ಕುರಿತು ಅರಣ್ಯ ಇಲಾಖೆಯವರು ಗಮನ ಹರಿಸಲು ತಮ್ಮ ಸಿಬ್ಬಂದಿಗಳನ್ನು ಬೀಟ್‌ಗಳಾಗಿ ನಿಯೋಜಿಸಿ ಗಮನ ಹರಿಸುತ್ತಿರಬೇಕೆಂದು ಹೇಳಿದರು.ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್‌. ಅರಸಿದ್ದಿ, ಜಿಲ್ಲಾ ಆರೋಗ್ಯ ಅಧಿಕಾರಿ ಟಿ. ಲಿಂಗರಾಜು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಎಸ್‌. ಹಿರೇಮಠ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ ಸೇರಿದಂತೆ ಅರಣ್ಯ, ಸಾರಿಗೆ ಇಲಾಖೆ,  ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.