ಮಕ್ಕಳಿಗೆ ಮೌಲ್ಯಯುತ ಶಿಕ್ಷಣವೇ ವಿದ್ಯಾಭಾರತಿಯ ಗುರಿ: ಪರಮೇಶ್ವರ ಹೆಗಡೆ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣವೇ ವಿದ್ಯಾಭಾರತಿಯ ಗುರಿ: ಪರಮೇಶ್ವರ ಹೆಗಡೆ  Value-based education for children is Vidya Bharati's goal: Parameshwara Hegde


ವಿಜಯಪುರ 15: ಮಕ್ಕಳಿಗೆ ಮಾತೃಭಾಷೆಯಲ್ಲಿ ದೇಶಭಕ್ತಿ, ಸಂಸ್ಕೃತಿ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದೇ ವಿದ್ಯಾಭಾರತಿ ಕರ್ನಾಟಕದ ಮುಖ್ಯ ಗುರಿಯಾಗಿದೆ ಎಂದು ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ ಹೇಳಿದರು. ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸೆ.12ರಂದು ‘ವಂದೇ ಮಾತರಂ’ 150ನೇ ವರ್ಷಾಚರಣೆ ಅಂಗವಾಗಿ ವಿದ್ಯಾಭಾರತಿ ಕರ್ನಾಟಕದ ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳ ಕಾಲದಲ್ಲಿ ದೇಶದ ಸಂಸ್ಕೃತಿ, ದೇಶಭಕ್ತಿ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ಇತ್ತು.

ಬ್ರಿಟಿಷರ ಆಳ್ವಿಕೆಯಲ್ಲಿ ಅವರ ಅಗತ್ಯಕ್ಕೆ ತಕ್ಕ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಿತು. ಸ್ವಾತಂತ್ರ್ಯಾನಂತರವೂ ಅದೇ ವ್ಯವಸ್ಥೆ ಮುಂದುವರಿಯಿತು. ಇದನ್ನು ಬದಲಿಸುವ ಉದ್ದೇಶದಿಂದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು, ದೇಶಾದ್ಯಂತ ಸುಮಾರು 20 ಸಾವಿರ ಸಂಸ್ಥೆಗಳು ಮೌಲ್ಯಯುತ ಶಿಕ್ಷಣ ನೀಡುತ್ತಿವೆ ಎಂದರು. ನಿವೃತ್ತ ಐಎಎಸ್ ಅಧಿಕಾರಿ ಮಂಜುನಾಥ ಪ್ರಸಾದ ಮಾತನಾಡಿ, ಬಂಕಿಮಚಂದ್ರ ಚಟರ್ಜಿ ರಚಿಸಿದ ‘ವಂದೇ ಮಾತರಂ’ ಗೀತೆಯ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಅದು ನೀಡಿದ ಪ್ರೇರಣೆಯನ್ನು ವಿವರಿಸಿದರು.

ಸೆ.25ರಂದು ಬೆಳಗ್ಗೆ 11 ಗಂಟೆಗೆ ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಏಕಕಾಲದಲ್ಲಿ ಪೂರ್ಣ ‘ವಂದೇ ಮಾತರಂ’ ಗೀತೆಯನ್ನು ಹಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 47 ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರ್‌ಎಸ್‌ಎಸ್ ವಿಭಾಗ ಸಂಘಟಕ ಬಾಳು ಭಕ್ತಿ, ಜಿಲ್ಲಾ ಅಧ್ಯಕ್ಷ ಪ್ರಭು ಕಡಿ, ರಾಮಚಂದ್ರ ಕೊಡಬಾಗಿ, ರಾಜಶೇಖರ ಉಮರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ಸಂಯೋಜಕ ಚಂದ್ರಶೇಖರ ಕವಟಗಿ ಸ್ವಾಗತಿಸಿದರು.