ಕೋವಿಡ್-19ಗೆ ಲಸಿಕೆ: ಯೋಜನೆ ಮತ್ತು ಸಿದ್ಧತೆಗಳ ಪರಿಶೀಲನೆ ನಡೆಸಿದ ಮೋದಿ

ನವದೆಹಲಿ, ಜೂ 30: ಕೋವಿಡ್-19ಗೆ ಲಸಿಕೆ ತಯಾರಿಕೆಯ ಯೋಜನೆ, ಸಿದ್ಧತೆಗಳು ಹಾಗೂ ಲಸಿಕೆ ಲಭ್ಯತೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು.ಭಾರತದ ಅಪಾರ ಮತ್ತು ವೈವಿಧ್ಯಮಯ ಜನಸಂಖ್ಯೆಗೆ ಲಸಿಕೆ, ವೈದ್ಯಕೀಯ ವಸ್ತುಗಳ ಪೂರೈಕೆ, ನಿರ್ವಹಣೆ, ಅಪಾಯದಲ್ಲಿರುವ ಜನಸಂಖ್ಯೆಗೆ ಆದ್ಯತೆ ನೀಡಬೇಕು. ಈ ಪ್ರಕ್ರಿಯೆಯಲ್ಲಿ ತೊಡಗಿರುವ ವಿವಿಧ ಏಜೆನ್ಸಿಗಳ ನಡುವೆ ಸಮನ್ವಯತೆ ಅಗತ್ಯವಾಗಿದ್ದು, ಈ ರಾಷ್ಟ್ರೀಯ ಪ್ರಯತ್ನದಲ್ಲಿ ಖಾಸಗಿ ವಲಯ ಮತ್ತು ನಾಗರಿಕ ಸಮಾಜದ ಪಾತ್ರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಸಭೆಯಲ್ಲಿ ಮಾಹಿತಿ ಪಡೆದರು. 

ಈ ರಾಷ್ಟ್ರೀಯ ಪ್ರಯತ್ನದ ಅಡಿಪಾಯವನ್ನು ರೂಪಿಸುವ ನಾಲ್ಕು ಮಾರ್ಗದರ್ಶಿ ಸೂತ್ರಗಳನ್ನು ಪ್ರಧಾನಿ ಸಭೆಯ ಮುಂದಿರಿಸಿದರು. ಮೊದಲನೆಯದಾಗಿ, ಹೆಚ್ಚು ಅಪಾಯ ಇರುವ ಗುಂಪುಗಳನ್ನು ಗುರುತಿಸಿ ಶೀಘ್ರ ಲಸಿಕೆ ಹಾಕಲು ಆದ್ಯತೆ ನೀಡಬೇಕು, ಉದಾಹರಣೆಗೆ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ವೈದ್ಯಕೀಯೇತರ ಮುಂಚೂಣಿ ಕೋರೊನಾ ಯೋಧರು ಮತ್ತು ದುರ್ಬಲ ಸಾಮಾನ್ಯ ಜನರಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.ಎರಡನೆಯದಾಗಿ, “ಎಲ್ಲರಿಗೂ, ಎಲ್ಲೆಡೆಯೂ” ಲಸಿಕೆ ಎಂಬುದಾಗಬೇಕು. ಅಂದರೆ ಲಸಿಕೆ ಪಡೆಯಲು ಯಾವುದೇ ನಿವಾಸ ಸಂಬಂಧಿತ ನಿರ್ಬಂಧಗಳನ್ನು ವಿಧಿಸಬಾರದು; ಮೂರನೆಯದಾಗಿ, ಆ ಲಸಿಕೆಯು ಕೈಗೆಟುಕುವಂತಿರಬೇಕು ಮತ್ತು ಸಾರ್ವತ್ರಿಕವಾಗಿರಬೇಕು - ಯಾವುದೇ ವ್ಯಕ್ತಿಯನ್ನೂ ಬಿಡಬಾರದು; ನಾಲ್ಕನೆಯದಾಗಿ, ಉತ್ಪಾದನೆಯಿಂದ ಲಸಿಕೆ ಹಾಕುವವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ತಂತ್ರಜ್ಞಾನದ ಬಳಕೆಯೊಂದಿಗೆ ನೈಜ ಸಮಯದ ಮೇಲ್ವಿಚಾರಣೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ. 

ಎಲ್ಲರಿಗೂ ಹೆಚ್ಚು ಪರಿಣಾಮಕಾರಿ ಮತ್ತು ಸಮಯೋಚಿತವಾಗಿ ಲಸಿಕೆ ಹಾಕುವ ರಾಷ್ಟ್ರೀಯ ಪ್ರಯತ್ನದ ಬೆನ್ನೆಲುಬಾಗಿ ಲಭ್ಯವಿರುವ ತಂತ್ರಜ್ಞಾನದ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವಂತೆ ಪ್ರಧಾನಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕುವ ಬಗ್ಗೆ ವಿವರವಾದ ಯೋಜನೆಯನ್ನು ಕೂಡಲೇ ಕೈಗೊಳ್ಳಬೇಕು. ಲಸಿಕೆ ಅಭಿವೃದ್ಧಿ ಪ್ರಯತ್ನಗಳ ವಸ್ತುಸ್ಥಿತಿಯನ್ನು ಸಭೆಯಲ್ಲಿ ಪರಿಶೀಲಿಸಿದರು. ಕೋವಿಡ್ -19 ವಿರುದ್ಧದ ಲಸಿಕೆಯ ಪ್ರಯತ್ನಗಳಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದರು.