ವಿ.ಎಸ್‌.ಕೆ ವಿವಿ ಎಸ್ಸಿ- ಎಸ್ಟಿ ಹಾಸ್ಟೆಲ್ ಸಮಸ್ಯೆಗಳ ಪರಿಹಾರಕ್ಕೆ ಭರವಸೆ

ವಿ.ಎಸ್‌.ಕೆ ವಿವಿ ಎಸ್ಸಿ- ಎಸ್ಟಿ ಹಾಸ್ಟೆಲ್ ಸಮಸ್ಯೆಗಳ ಪರಿಹಾರಕ್ಕೆ ಭರವಸೆ VSK University promises to resolve SC-ST hostel issues

ಬಳ್ಳಾರಿ 17:  ನಗರದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಎಸ್ಸಿ/ಎಸ್ಟಿ ವಸತಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ಖಂಡಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್ಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪರೀಶೀಲನೆ ನಡೆಸಿದರು.ಶನಿವಾರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ವರಿ ಎಸ್ಸಿ/ಎಸ್ಟಿ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಕಳಪೆ ಆಹಾರ ವ್ಯವಸ್ಥೆ, ನೈರ್ಮಲ್ಯದ ಕೊರತೆ, ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆಗಳು, ಚರ್ಮರೋಗದ ಲಕ್ಷಣಗಳು ಹಾಗೂ ಕುಡಿಯುವ ನೀರಿನ ಶುಚಿತ್ವದ ಸಮಸ್ಯೆಗಳನ್ನು ಪರೀಶೀಲಿಸಿದರು.ವಿಶ್ವವಿದ್ಯಾಲಯದ ಎಸ್ಸಿ/ಎಸ್ಟಿ ವಸತಿ ನಿಲಯಗಳ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸುವ ಕುರಿತು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಮೇ 19ರಂದು ವಸತಿ ನಿಲಯಪಾಲಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವುದಾಗಿ ಭರವಸೆ ನೀಡಿದರು.ಹಾಸ್ಟೆಲ್ಗಳಲ್ಲಿ ವಾಸಿಸುತ್ತಿರುವ ಸುಮಾರು 400 ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಿಹಾರಿಕಾ ಆರ್‌., ಅರುಣ್ ಭಗತ್, ಭಾಗ್ಯ ಬಾಯಿ, ಮಂಜುನಾಥ, ಹನುಮೇಶ ಬನ್ನಿಕೊಪ್ಪ, ಬಾರೇಶ್, ವಿನಯ್ ಕುಮಾರ್ ಹಾಗೂ ಮಹೇಶ್ ನಾಯಕ ಉಪಸ್ಥಿತರಿದ್ದರು.