ವಿಬಿ-ಜಿ ರಾಮ್ ಜಿ: ಕೂಲಿಕಾರರಿಗೆ ಉದ್ಯೋಗ ಕಲ್ಪಿಸಿ ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ

 ವಿಬಿ-ಜಿ ರಾಮ್ ಜಿ: ಕೂಲಿಕಾರರಿಗೆ ಉದ್ಯೋಗ ಕಲ್ಪಿಸಿ ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ VB-G Ram G: Provide employment to laborers G.P. Deputy Secretary Prakash Wadda's notice

ಲೋಕದರ್ಶನ ವರದಿ 

ವಿಜಯಪುರ  27:  ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಗ್ರಾಮಾಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಅನುಷ್ಠಾನಗೊಳಿಸುವುದು ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಗ್ರಾಮ ಪಂಚಾಯಿತಿಗಳು ಹೆಚ್ಚಿನ ಕಾಮಗಾರಿಗಳನ್ನು ಗುರುತಿಸಿ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸಬೇಕು ಎಂದು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿದ ಅವರು, ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಅಮೃತ ಸರೋವರ ಕಾಮಗಾರಿಯನ್ನು ಪರೀಶೀಲಿಸಿ, ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರರೊಂದಿಗೆ ನೇರವಾಗಿ ಸಂವಾದ ನಡೆಸಿದ ಬಳಿಕ ಅವರು ಮಾತನಾಡಿದರು. ಕಾಮಗಾರಿ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಸಮರ​‍್ಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಅವರು, ಪ್ರತಿದಿನ 500ಕ್ಕೂ ಹೆಚ್ಚು ಕೂಲಿಕಾರರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯೊಂದಿಗೆ ಕಾಮಗಾರಿಗಳನ್ನು ಯೋಜಿತವಾಗಿ ಅನುಷ್ಠಾನಗೊಳಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಗಳು, ಕಾಲುವೆಗಳು ಸೇರಿದಂತೆ ಕೈಗೊಳ್ಳಬಹುದಾದ ಎಲ್ಲ ಕಾಮಗಾರಿಗಳನ್ನು ಗುರುತಿಸಿ ಯುಕ್ತಧಾರ ತಂತ್ರಾಂಶದಲ್ಲಿ ತ್ವರಿತವಾಗಿ ಅಳವಡಿಸಿ, ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸುವಂತೆ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ಕಾಮಗಾರಿ ಸ್ಥಳದಲ್ಲಿ ಮಣ್ಣಿನ ಗುಣಮಟ್ಟ ಹಾಗೂ ಕಾಮಗಾರಿಯ ಪ್ರಗತಿಯನ್ನು ಖುದ್ದಾಗಿ ಪರೀಶೀಲಿಸಿ ಅಗತ್ಯ ಸಲಹೆಗಳನ್ನು ನೀಡಿದರು.

ತ್ವರಿತವಾಗಿ ಕೂಲಿ ಪಾವತಿ:  ವಿಬಿ-ಜಿ ರಾಮ್ ಜಿ ಯೋಜನೆಯಡಿ ಮುಂದಿನ ದಿನಗಳಲ್ಲಿ ಕೂಲಿ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ನಿಗದಿತ ಅವಧಿಯಲ್ಲೇ ಕೂಲಿ ಮೊತ್ತವನ್ನು ಪಾವತಿಸಲಾಗುವುದು ಎಂದು ಕೂಲಿಕಾರರಿಗೆ ಭರವಸೆ ನೀಡಿದರು. ಪ್ರತಿಯೊಬ್ಬ ಕೂಲಿಕಾರರು ಪ್ರತಿದಿನ ಎರಡು ಬಾರಿ ಎನ್ ಎಂಎಂಎಸ್ ಆಪ್ ಮೂಲಕ ನೈಜ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದ್ದು, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.  ಕೂಲಿಕಾರರು ದುಡಿದು ಗಳಿಸಿದ ಕೂಲಿ ಮೊತ್ತವನ್ನು ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು,